Thursday, July 2, 2026
Google search engine

Homeಕಲೆ-ಸಾಹಿತ್ಯವಚನ ಸಾಹಿತ್ಯ ಉಳಿಸಿದವರು ಫ.ಗು.ಹಳಕಟ್ಟಿ : ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ

ವಚನ ಸಾಹಿತ್ಯ ಉಳಿಸಿದವರು ಫ.ಗು.ಹಳಕಟ್ಟಿ : ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ

ಬೆಂಗಳೂರು : ಅಜ್ಞಾತವಾಗಿದ್ದು, ಎಲ್ಲೆಡೆ ಚದುರಿಹೋಗಿದ್ದ ವಚನ ಸಾಹಿತ್ಯವನ್ನು ಸಂಗ್ರಹಿಸಿ ಬೆಳಕಿಗೆ ತಂದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರಿಲ್ಲದಿದ್ದರೆ ಶರಣ ಸಂಸ್ಕೃತಿ, ಲಿಂಗಾಯತ ಧರ್ಮ ಹಾಗೂ ಬಸವಾದಿ ಶರಣರ ಪರಂಪರೆ ಕಳೆದುಹೋಗುತ್ತಿತ್ತು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘ ಹಾಗೂ ವಿಜಯಪುರದ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸಂಯುಕ್ತವಾಗಿ ಸಚಿವರ ನಿವಾಸದಲ್ಲಿ ಆಯೋಜಿಸಿದ್ದ ಹಳಕಟ್ಟಿ ಜನ್ಮದಿನ ಮತ್ತು ವಚನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡ ಮೂಲದ ಹಳಕಟ್ಟಿ ವಿಜಯಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅಪಾರ ಸಾಧನೆ ಮಾಡಿದ್ದಾರೆ. ಅವರ ಪರಿಶ್ರಮದಿಂದ ನೂರಾರು ವಚನಕಾರರು ಹಾಗೂ ಅವರ ಕೃತಿಗಳು ನಾಡಿಗೆ ಪರಿಚಯವಾಗಿವೆ ಎಂದು ಸಚಿವರು ಹೇಳಿದರು. ಜೊತೆಗೆ ಅವರು ಮುದ್ರಣಾಲಯ ಸ್ಥಾಪಿಸಿದ ಸಾಹಸಿಯೂ ಆಗಿದ್ದರು ಎಂದು ಸ್ಮರಿಸಿದರು.

ಸರ್ಕಾರ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುತ್ತಿದ್ದು, ಅದರ ರೂಪುರೇಷೆಗಳ ಕುರಿತು ಶರಣ ಸಾಹಿತ್ಯ ಪರಿಷತ್ತು ನೀಡಿರುವ ಸಲಹೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.

ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ಹಳಕಟ್ಟಿ ಅವರ ಪರಿಶ್ರಮದಿಂದಲೇ ಬಸವಣ್ಣ ಸೇರಿದಂತೆ ಶರಣರ ವಿಚಾರಧಾರೆಗಳು ವಿಶ್ವಕ್ಕೆ ಪರಿಚಿತವಾದವು ಎಂದು ಹೇಳಿದರು. ವಚನ ಸಂಸ್ಕೃತಿ ಬೆಳೆಯಲು ಹಳಕಟ್ಟಿಯವರ ಕೊಡುಗೆ ಮೂಲಭೂತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಚನ ಸಾಹಿತ್ಯ ಸಂಗ್ರಹಣೆಯ ಮಹತ್ವದ ಕಾರ್ಯವನ್ನು ಹಳಕಟ್ಟಿ ನೆರವೇರಿಸಿದರೆ, ಅದನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಎಂ.ಬಿ. ಪಾಟೀಲ್ ನೇತೃತ್ವದ ಬಿಎಲ್‌ಡಿಇ ಸಂಸ್ಥೆ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಿ. ಸೋಮಶೇಖರ್, ಸಿ.ಆರ್.ಜನಾರ್ದನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular