ಬೆಂಗಳೂರು : ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ತಾವು ಹಾಗೂ ಮುಖ್ಯಮಂತ್ರಿ ಈಗಾಗಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಸರ್ಕಾರ ಖಾಸಗೀಕರಣದ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಖಾಸಗೀಕರಣದ ಹಿಂದೆ ಸರ್ಕಾರದ ಹಿತಾಸಕ್ತಿ ಇದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ ಅವರು, ಸರ್ಕಾರಕ್ಕೆ ಖಾಸಗೀಕರಣ ಮಾಡಬೇಕೆಂದಿದ್ದರೆ ಎಸ್ಕಾಂಗಳು ಹಾಗೂ ಕೆಪಿಟಿಸಿಎಲ್ ಸೇರಿದಂತೆ ಇಲಾಖೆಗಳು ವಿರೋಧ ವ್ಯಕ್ತಪಡಿಸುವ ಪರಿಸ್ಥಿತಿ ಇರಲಿಲ್ಲ ಎಂದು ಪ್ರಶ್ನಿಸಿದರು.
ಇನ್ನೂ ವಿದ್ಯುತ್ ಖಾಸಗೀಕರಣಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಿದ್ದು, ಅದರ ಆಧಾರದಲ್ಲಿ ಟಾಟಾ ಸಂಸ್ಥೆ ಕೆಇಆರ್ಸಿಎಗೆ ನೇರವಾಗಿ ಅರ್ಜಿ ಸಲ್ಲಿಸಿದೆ. ಆದರೆ ರಾಜ್ಯದ ಎಸ್ಕಾಂಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಸಚಿವರು ಹೇಳಿದರು.
ಮಳೆ ಕೊರತೆಯ ನಡುವೆಯೂ ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಅಭಾವ ಇಲ್ಲ. ಪೂರೈಕೆಗೆ ಸಾಕಷ್ಟು ವಿದ್ಯುತ್ ಸಂಗ್ರಹವಿದೆ ಎಂದು ತಿಳಿಸಿದರು. ಮಳೆಗಾಲ ಇನ್ನೂ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದೆ ಎಂದರು.
ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿಗೆ ಅನರ್ಹರು ಸೇರಿರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಆದರೆ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯ ಸೌಲಭ್ಯ ಕಡಿತಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಗೃಹಜ್ಯೋತಿ ಫಲಾನುಭವಿಗಳಿಂದ ಜಾತಿ ಮಾಹಿತಿ ಸಂಗ್ರಹಿಸುವುದು ಸಾಮಾನ್ಯ ಸಮೀಕ್ಷಾ ಪ್ರಕ್ರಿಯೆಯ ಭಾಗವಾಗಿದ್ದು, ಇದರಲ್ಲಿ ತಪ್ಪಿಲ್ಲ ಎಂದು ಸಚಿವರು ಹೇಳಿದರು. ಇದು ಜಾತಿ ಪ್ರಮಾಣಪತ್ರವಲ್ಲ, ಕೇವಲ ಮಾಹಿತಿಗಾಗಿ ಸಂಗ್ರಹಿಸಲಾಗುತ್ತಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.



