Thursday, July 2, 2026
Google search engine

Homeರಾಜಕೀಯಸರ್ಕಾರ ಅಂದಮೇಲೆ ನ್ಯೂನತೆಗಳು ಇರುತ್ತವೆ : ಗ್ಯಾರಂಟಿ ಲೋಪಗಳ ಬಗ್ಗೆ ರಾಯರೆಡ್ಡಿ ಹೇಳಿಕೆ

ಸರ್ಕಾರ ಅಂದಮೇಲೆ ನ್ಯೂನತೆಗಳು ಇರುತ್ತವೆ : ಗ್ಯಾರಂಟಿ ಲೋಪಗಳ ಬಗ್ಗೆ ರಾಯರೆಡ್ಡಿ ಹೇಳಿಕೆ

ಕೊಪ್ಪಳ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ರಾಜಕೀಯ ಚರ್ಚೆಗಳು ತೀವ್ರವಾಗಿರುವ ನಡುವೆಯೇ, ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೆಲ ಲೋಪಗಳಿರುವುದನ್ನು ಒಪ್ಪಿಕೊಂಡಿದ್ದಾರೆ.

ಯಲಬುರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಂದಮೇಲೆ ಕೆಲವು ನ್ಯೂನತೆಗಳು ಸಹಜ. ಅವುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇನ್ನೂ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 1 ಕೋಟಿ 26 ಲಕ್ಷ ಫಲಾನುಭವಿಗಳಿಗೆ ಹಣ ತಲುಪಬೇಕಿದ್ದು, ದಾಖಲಾತಿ ದೋಷ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಸದ್ಯ 2 ಲಕ್ಷ ಅರ್ಹ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ ಎಂದು ತಿಳಿಸಿದರಲ್ಲದೆ, ಪ್ರತಿ ತಿಂಗಳು ಸುಮಾರು 2,500 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ನಡೆಯುತ್ತಿರುವ ಕಾರಣವನ್ನೂ ವಿವರಿಸಿದ ಅವರು, ಕೆಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಅದೇ ರೀತಿ ಗೃಹಜ್ಯೋತಿ ಯೋಜನೆಯಡಿ ಅನರ್ಹರು, ಅದರಲ್ಲೂ ಕೆಲವು ಸರ್ಕಾರಿ ನೌಕರರ ಮನೆಗಳಿಗೂ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳು ಯಾವುದೇ ವ್ಯಕ್ತಿಯ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಬದ್ಧತೆಯ ಕಾರ್ಯಕ್ರಮವಾಗಿದೆ. ಯಾರೇ ಮುಖ್ಯಮಂತ್ರಿ ಆದರೂ ಈ ಯೋಜನೆಗಳು ಮುಂದುವರಿಯಲಿವೆ ಎಂದು ರಾಯರೆಡ್ಡಿ ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಯೋಜನೆಗಳನ್ನು ಮುಂದುವರಿಸುವ ಬದ್ಧತೆ ಇದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಸಂಪೂರ್ಣ ಮಾಹಿತಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ, ಇನ್ನೊಂದು ವಾರದೊಳಗೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular