Thursday, July 2, 2026
Google search engine

Homeರಾಜ್ಯಬಿಡದಿ ಟೌನ್‌ಶಿಪ್ ರಾಜಕೀಯ: ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

ಬಿಡದಿ ಟೌನ್‌ಶಿಪ್ ರಾಜಕೀಯ: ಡಿ.ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಹಾಗೂ ಮಾಗಡಿ ರಸ್ತೆಯ ಕಲ್ಲು ಕ್ವಾರಿ ದುರಂತದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಳೆಯ ಇತಿಹಾಸವನ್ನು ನೆನಪಿಸುವ ಮೂಲಕ ಕೌಂಟರ್ ಕೊಟ್ಟಿದ್ದಾರೆ.

ಇವ್ರು ನಾಲ್ಕು ತಾಲೂಕಿಗೆ ಮುಖ್ಯಮಂತ್ರಿನಾ? ಕರ್ನಾಟಕಕ್ಕೆ ಮುಖ್ಯಮಂತ್ರಿನಾ?

ರಾಮನಗರದ ಅಭಿವೃದ್ಧಿ ಕುರಿತು ಮಾತನಾಡಿದ ಕುಮಾರಸ್ವಾಮಿ, “ರಾಮನಗರದ ನಿಯೋಗ ನಿನ್ನೆ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ 770 ಕೋಟಿ ರೂ. ಅನುದಾನದ ಬಗ್ಗೆ ಕೇಳಲು ಬಂದಿತ್ತೇ ಹೊರತು ಬಿಡದಿ ಟೌನ್‌ಶಿಪ್ ಬಗ್ಗೆ ಅಲ್ಲ. ಆದರೆ ಅವರ ಮುಂದೆ ಬಿಡದಿ ಬಗ್ಗೆ ಭಾಷಣ ಮಾಡಿದ್ದನ್ನು ನಾನು ನೋಡಿದೆ. ಪಾಪ, ಅವರು ನಾಲ್ಕು ತಾಲೂಕುಗಳು ಮುಖ್ಯ ಅಂದಿದ್ದಾರೆ. ಇವರು ನಾಲ್ಕು ತಾಲೂಕಿಗೆ ಮುಖ್ಯಮಂತ್ರಿನಾ? ಕರ್ನಾಟಕಕ್ಕೆ ಮುಖ್ಯಮಂತ್ರಿನಾ? ಅಥವಾ ಬೆಂಗಳೂರು ದಕ್ಷಿಣಕ್ಕೆ ಮುಖ್ಯಮಂತ್ರಿನಾ?” ಎಂದು ಖಾರವಾಗಿ ಪ್ರಶ್ನಿಸಿದರು.

ನಾನೇನು ಬಂಡೆ ಒಡೆದು ವಿದೇಶಕ್ಕೆ ಸಾಗಿಸಲಿಲ್ಲ!

“ರಾಮನಗರ, ಕನಕಪುರ ಅಭಿವೃದ್ಧಿ ಆಗಿಲ್ಲ ಎನ್ನುತ್ತಾರೆ. ನಾನು ರಾಮನಗರಕ್ಕೆ ಕಾಲಿಟ್ಟಾಗ ಅಲ್ಲಿ ಒಂದು ಹಳ್ಳಿ ರಸ್ತೆಯೂ ಇರಲಿಲ್ಲ. ಕನಕಪುರಕ್ಕೆ ಮೊದಲು ಕರೆಂಟ್, ಕುಡಿಯುವ ನೀರು ಇತ್ತಾ? ಇದೆಲ್ಲಾ ಯಾರ ಕಾಲದಲ್ಲಿ ಆಗಿದ್ದು? ನಾನೇನು ಬಂಡೆ ಒಡೆಯಲು ಹೋಗಿರಲಿಲ್ಲ, ಬಂಡೆ ಒಡೆದು ವಿದೇಶಕ್ಕೆ ಸಾಗಿಸಲೂ ಇಲ್ಲ. ಕನಕಪುರದ ಜನಕ್ಕೆ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

“ಹಳ್ಳಿಗಳಲ್ಲಿ ಹೆರಿಗೆಗೆ ಮಹಿಳೆಯರನ್ನು ಚಿಬ್ಲಲ್ಲಿ (ಬುಟ್ಟಿ) ಎತ್ತಿಕೊಂಡು ಬರುತ್ತಿದ್ದ ಪರಿಸ್ಥಿತಿ ಇತ್ತು. ನಾನು ಅಭಿವೃದ್ಧಿ ಮಾಡಲು ಹೋದಾಗ ಮಾಡಬೇಡ ಎಂದವರು ಯಾರು? ಆವಾಗ ನಿಮಗೆ ಜ್ಞಾನೋದಯ ಕೊಟ್ಟವರು ಯಾರು? ಈಗ ಮಾಡಿ ಅಂತ ಜ್ಞಾನೋದಯ ಕೊಟ್ಟವರು ಯಾರು? 4,000 ಅರ್ಜಿ ಹಾಕಿದವರಿಗೆ ಇನ್ನು ಉತ್ತರ ಕೊಟ್ಟಿಲ್ಲ, ಇವರು ಕಥೆ ಹೇಳಿಕೊಂಡು ಹೊರಟಿದ್ದಾರೆ. ಇದರ ವಿರುದ್ಧ ರೈತರು ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.” – ಎಚ್.ಡಿ. ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್ ಮಾಡಲ್ಲ ಅಂತ ಆವತ್ತೇ ಹೇಳಿದ್ದೆ!

ನಗರಾಭಿವೃದ್ಧಿ ಯೋಜನೆಗಳ ವಿಳಂಬದ ಬಗ್ಗೆ ಮಾತನಾಡಿದ ಅವರು, “ನಾನು ಅವತ್ತೇ ಬಿಡದಿ ಟೌನ್‌ಶಿಪ್ ಮಾಡಲ್ಲ ಎಂದು ಹೇಳಿದ್ದೆ. ಸ್ವಾತಂತ್ರ್ಯ ದಿನಾಚರಣೆಯಂದೇ ವಿಶ್ವೇಶ್ವರಯ್ಯ ಬಡಾವಣೆ, ಕಾರಂತ ಬಡಾವಣೆ ಘೋಷಣೆ ಮಾಡಿದ್ದೆ. ಎಸ್‌ ಎಂ ಕೃಷ್ಣ ರಸ್ತೆ ಅಂತ ದೊಡ್ಡದಾಗಿ ಹೇಳಿಕೊಳ್ಳುತ್ತಾರೆ, ಆದರೆ 20 ವರ್ಷ ಆದರೂ ಸೈಟ್ ಕೊಟ್ಟಿದ್ದೀರಾ? ಅರ್ಕಾವತಿ ಲೇಔಟ್ ಅನ್ನಂತೂ ಮುಳುಗಿಸಿಬಿಟ್ಟರು” ಎಂದು ಆಕ್ರೋಶ ಹೊರಹಾಕಿದರು.

ಗ್ಯಾರಂಟಿ ಪರಿಷ್ಕರಣೆ: ಮನೆ ಮನೆಯಲ್ಲಿ ಜಾತಿ ಕೇಳ್ತಿದ್ದಾರೆ!

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಮಾತನಾಡಿದ ಅವರು, “ಸುಜಾತಾ ಟಾಕೀಸ್ ಎದುರಿನ ಬಿಲ್ಡಿಂಗ್ ಟಾಪ್ ಫ್ಲೋರ್‌ನಲ್ಲಿ ಕುಳಿತು ಮುಂದಿನ 2028ರ ಚುನಾವಣಾ ಸ್ಟ್ರಾಟಜಿ ಮಾಡುತ್ತಿದ್ದಾರೆ. ಡೇಟಾ ಸಂಗ್ರಹಕ್ಕಾಗಿ ಗೃಹಲಕ್ಷ್ಮಿ ಆಯ್ತು, ಈಗ ಗೃಹಜ್ಯೋತಿ ಯೋಜನೆಗೆ ಮನೆ ಮನೆಯಲ್ಲಿ ಜಾತಿ ಕೇಳುತ್ತಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆಗೆ ಒಂದು ಫೋಟೋ ಹಾಕಬೇಕಂತೆ. ಈ ಫೋಟೋಗೆ ಜನ ಎಷ್ಟು ದುಡ್ಡು ಖರ್ಚು ಮಾಡಬೇಕು? ಅನರ್ಹರ ಹೆಸರನ್ನು ಡಿಲೀಟ್ ಮಾಡುತ್ತಾರಂತೆ, ಮೂರು ವರ್ಷದ ನಂತರ ಈಗ ಇವರಿಗೆ ಜ್ಞಾನೋದಯವಾಗಿದೆ. ಇಲ್ಲಿಯವರೆಗೆ ಏನು ಮಾಡುತ್ತಿದ್ದರು?” ಎಂದು ಪ್ರಶ್ನಿಸಿದ ಅವರು, ಮೊದಲು ಬೀದಿಯಲ್ಲಿ ಬಿದ್ದಿರುವ ಕಸದ ಕಡೆ ಸರ್ಕಾರ ಗಮನಹರಿಸಲಿ ಎಂದರು.

ಕಲ್ಲು ಕ್ವಾರಿ ದುರಂತ: ದೊಡ್ಡ ದಂದೆಕೋರರ ಕೈವಾಡ

ಮಾಗಡಿ ರಸ್ತೆಯ ಮಾದಪಟ್ಟಣ ಗ್ರಾಮದ ಕಲ್ಲು ಕ್ವಾರಿ ದುರಂತದಲ್ಲಿ 7-8 ಜನ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ, “ಕ್ವಾರಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇಂತಹ ಭೀಕರ ಪ್ರಕರಣವನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. ಇದರ ಹಿಂದೆ ದೊಡ್ಡ ದಂದೆಕೋರರ ಕೈವಾಡವಿದ್ದು, ಸರ್ಕಾರ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು” ಎಂದು ಆಗ್ರಹಿಸಿದರು. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular