Thursday, July 2, 2026
Google search engine

Homeರಾಜಕೀಯಪ್ರತಿ ತಿಂಗಳು 2 ದಿನ ಪ್ರಜಾಸೇವೆ ಕಡ್ಡಾಯ : ಸಚಿವರಿಗೆ ಸಿಎಂ ಡಿಕೆಶಿ ಹೊಸ ಸೂಚನೆ

ಪ್ರತಿ ತಿಂಗಳು 2 ದಿನ ಪ್ರಜಾಸೇವೆ ಕಡ್ಡಾಯ : ಸಚಿವರಿಗೆ ಸಿಎಂ ಡಿಕೆಶಿ ಹೊಸ ಸೂಚನೆ

ಬೆಂಗಳೂರು : ರಾಜ್ಯದ ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸಿ ಪರಿಹರಿಸಲು ರಾಜ್ಯದಲ್ಲಿ ಪ್ರತ್ಯೇಕ ‘ಪ್ರಜಾಸೇವೆ’ ಇಲಾಖೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಇಲಾಖೆಯ ಮೂಲಕ ಜನರ ಕುಂದುಕೊರತೆಗಳನ್ನು ಆಲಿಸಿ, ಸಂಬಂಧಿತ ಇಲಾಖೆಗಳ ಗಮನಕ್ಕೆ ತಂದು ಶೀಘ್ರ ಪರಿಹಾರ ಕಲ್ಪಿಸಲಾಗುವುದು. ಹಾಗೂ ಇಲಾಖೆಯ ಜವಾಬ್ದಾರಿಯನ್ನು ಒಬ್ಬ ಸಚಿವರಿಗೆ ವಹಿಸಲಾಗುವುದರ ಜೊತೆಗೆ, ಇಲಾಖೆಯ ಕಾರ್ಯನಿರ್ವಹಣೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.

ಇನ್ನೂ ಹೊಸ ವ್ಯವಸ್ಥೆಯಡಿ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರುಗಳು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಕಡ್ಡಾಯವಾಗಿ ಜಿಲ್ಲೆಗಳಿಗೆ ಭೇಟಿ ನೀಡಿ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಬೇಕು. ಸರ್ಕಾರಿ ರಜೆ ಇದ್ದಲ್ಲಿ ಮಾತ್ರ ದಿನಾಂಕ ಬದಲಾವಣೆ ಮಾಡಬಹುದು. ಜಿಲ್ಲಾ ಪ್ರವಾಸದ ವೇಳೆ ಸ್ಥಳೀಯ ಶಾಸಕರೊಂದಿಗೆ ಜಂಟಿ ಸಭೆ ನಡೆಸುವುದು ಕಡ್ಡಾಯವಾಗಿರಲಿದೆ. ಸಚಿವರ ಜಿಲ್ಲಾ ಭೇಟಿಯ ದಿನಾಂಕವನ್ನು ಮುಂಚಿತವಾಗಿಯೇ ಸಾರ್ವಜನಿಕರಿಗೆ ತಿಳಿಸಲಾಗುವುದು. ಜಿಲ್ಲಾವಾರು ಪ್ರಮುಖ ಸಮಸ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಭೆಯಲ್ಲಿ ಚರ್ಚಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ, ರಾಜ್ಯದ ಯಾವುದೇ ಭಾಗದಲ್ಲಿ ಪ್ರತಿಭಟನೆ ನಡೆದರೂ ಪ್ರಜಾಸೇವೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮನವಿ ಪತ್ರಗಳನ್ನು ಸ್ವೀಕರಿಸಲಿದ್ದಾರೆ. ಬಳಿಕ ಅವುಗಳನ್ನು ಸಂಬಂಧಿತ ಇಲಾಖೆಗಳಿಗೆ ತಕ್ಷಣ ರವಾನಿಸಿ ಕ್ರಮ ಕೈಗೊಳ್ಳಲಾಗುವುದು. “ಜನರು ಸರ್ಕಾರದ ಬಳಿ ಬರುವ ಬದಲು, ಸರ್ಕಾರವೇ ಜನರ ಮನೆಬಾಗಿಲಿಗೆ ಹೋಗಬೇಕು ಎಂಬುದು ನಮ್ಮ ಉದ್ದೇಶ” ಎಂದು ಮುಖ್ಯಮಂತ್ರಿ ಹೇಳಿದರು.

ಇದೇ ಸಂದರ್ಭದಲ್ಲಿ ತಾವು ಕೂಡ ರಾಜ್ಯದ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸುವುದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು.

RELATED ARTICLES
- Advertisment -
Google search engine

Most Popular