Thursday, July 2, 2026
Google search engine

Homeರಾಜಕೀಯಕರ್ನಾಟಕದಲ್ಲಿ ಜಲಕ್ಷಾಮ ಗಂಭೀರ ಹಂತಕ್ಕೆ : ರೈತರಿಗೆ ಬೆಳೆ ಕುರಿತಾಗಿ ಸಿಎಂ ಎಚ್ಚರಿಕೆ

ಕರ್ನಾಟಕದಲ್ಲಿ ಜಲಕ್ಷಾಮ ಗಂಭೀರ ಹಂತಕ್ಕೆ : ರೈತರಿಗೆ ಬೆಳೆ ಕುರಿತಾಗಿ ಸಿಎಂ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರಗೊಂಡಿರುವ ಜಲಕ್ಷಾಮ ಹಾಗೂ ಬರಗಾಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟ ಸಭೆಯ ಬಳಿಕ ರಾಜ್ಯದ ಜನತೆಗೆ, ವಿಶೇಷವಾಗಿ ರೈತರಿಗೆ ಮಹತ್ವದ ಮನವಿ ಮಾಡಿದ್ದಾರೆ.

ಜಲಾಶಯಗಳಲ್ಲಿ ನೀರಿನ ಒಳಹರಿವು ಅತ್ಯಂತ ಕಡಿಮೆಯಾಗಿದ್ದು, ಹಲವು ಪ್ರಮುಖ ಡ್ಯಾಂಗಳಲ್ಲಿ ಶೂನ್ಯ ಮಟ್ಟಕ್ಕೆ ತಲುಪಿರುವುದಾಗಿ ಆತಂಕ ವ್ಯಕ್ತಪಡಿಸಿದ ಅವರು, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಬರಗಾಲದ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪ್ರಮುಖ ಜಲಾಶಯಗಳು ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಒಳಹರಿವು ತೀರಾ ಕುಸಿತಗೊಂಡಿದೆ.

ಇದು ಕೇವಲ ಕರ್ನಾಟಕದಲ್ಲೇ ಅಲ್ಲ, ದೇಶದಾದ್ಯಂತ ಗಂಭೀರ ಬರ ಪರಿಸ್ಥಿತಿ ಉಂಟಾಗುವ ಸೂಚನೆಗಳಿವೆ ಎಂದು ಸಿಎಂ ತಿಳಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಇನ್ನೂಇದೇ ಸಂದರ್ಭದಲ್ಲಿ ರೈತರಿಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ, ಜಲಾಶಯಗಳಲ್ಲಿ ಈಗಿರುವ ನೀರನ್ನು ಆಧರಿಸಿ ಹೊಸ ಬೆಳೆಗಳನ್ನು ಹಾಕುವುದನ್ನು ತಪ್ಪಿಸಬೇಕು. ಮಳೆಯ ಮೇಲೆ ಅವಲಂಬಿತ ಕೃಷಿಗೆ ಮಾತ್ರ ಮುಂದಾಗಬೇಕು ಎಂದು ಮನವಿ ಮಾಡಿದರು. ಡ್ಯಾಂಗಳಲ್ಲಿ ನೀರು ಇದೆ ಎಂಬ ಭರವಸೆಯಲ್ಲಿ ಬೆಳೆ ಮಾಡಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಬಂದರೆ ಮಾತ್ರ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ವಿದ್ಯುತ್ ಪೂರೈಕೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರಲ್ಲದೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ವಿದ್ಯುತ್ ಸಂಗ್ರಹ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular