ಬೆಂಗಳೂರು : ರಾಜಕೀಯ ಜಿದ್ದು ಮತ್ತು ಚಿತ್ರ ಬಿಡುಗಡೆ ಸುತ್ತಲಿನ ವಿವಾದಗಳ ನಡುವೆಯೇ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಕೊನೆಗೂ ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಸೆನ್ಸಾರ್ ಮಂಡಳಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ನೀಡಿದೆ. ಇದರೊಂದಿಗೆ ಚಿತ್ರ ಬಿಡುಗಡೆಗೆ ಅಧಿಕೃತ ಹಸಿರು ನಿಶಾನೆ ದೊರೆತಿದಂತಾಗಿದೆ.
ಈ ಹಿಂದೆ ತಮಿಳುನಾಡು ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದ್ದರೂ, ಸೆನ್ಸಾರ್ ಅನುಮತಿ ಸಿಗದೇ ವಿಳಂಬವಾಗಿತ್ತು. ಆಗಿನ ರಾಜ್ಯ ಸರ್ಕಾರದ ಹಸ್ತಕ್ಷೇಪದಿಂದ ಚಿತ್ರ ಬಿಡುಗಡೆ ತಡೆದಿತ್ತು ಎಂಬ ಚರ್ಚೆಗಳೂ ನಡೆದಿದ್ದವು. ಕಳೆದ ಜನವರಿಯಲ್ಲೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಈಗ ಕೊನೆಗೂ ಸೆನ್ಸಾರ್ ಅನುಮೋದನೆ ಪಡೆದು ರಿಲೀಸ್ ಗೆ ಸಜ್ಜಾಗಿದೆ.
ರಾಜಕೀಯ ಹಿನ್ನೆಲೆಯ ಕಾರಣದಿಂದಲೇ ಚಿತ್ರ ಬಿಡುಗಡೆ ಮುಂದೂಡಲಾಗಿತ್ತು ಎಂಬ ಮಾತುಗಳು ಚಿತ್ರರಂಗದಲ್ಲಿ ಹರಿದಾಡುತ್ತಿದ್ದವು. ಆದರೆ ಇದೀಗ ವಿಜಯ್ ರಾಜಕೀಯವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಹಿನ್ನೆಲೆ, ‘ಜನನಾಯಗನ್’ ಬಿಡುಗಡೆ ಮತ್ತಷ್ಟು ಗಮನ ಸೆಳೆಯುತ್ತಿದೆ.
ಚಿತ್ರವು ಇದೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬರುವ ನಿರೀಕ್ಷೆಯಿದೆ. ವಿಜಯ್ ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.



