ಮೈಸೂರು: ಭಾರತದಲ್ಲಿ ಬಹಳ ಧರ್ಮಗಳು ಇರುವುದು ಭಾಗ್ಯ. ಅವುಗಳನ್ನು ಸಂಭಾಳಿಸದೇ ಇರುವುದು ದೌರ್ಭಾಗ್ಯ ಎಂದು ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರಿಕೆರೆ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ, ಸಕಾಲ ಸ್ಪಂದನ ಸಹಯೋಗದಲ್ಲಿ ಇಎಂಆರ್‌ಸಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ಚಳವಳಿಯ ಆಶಯಗಳು ಮತ್ತು ಸಮಕಾಲೀನ ಸವಾಲುಗಳು ವಿಚಾರ ಮಂಥನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೧೯೯೨ರ ಬಾಬರಿ ಮಸೀದಿ ಧ್ವಂಸ, ೨೦೦೨ರ ಗುಜರಾತ್ ಗಲಭೆ, ೨೦೨೩ರ ಮಣಿಪುರ ಸಂಘರ್ಷಗಳು ಆಳವಾದ ಗಾಯಗಳು. ಇವು ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದರು
ವಾಟ್ಸಾಪ್ ಯೂನಿವರ್ಸಿಟಿಯಿಂದ ೨೦-೩೦ ವರ್ಷಗಳಲ್ಲಿ ಜ್ಞಾನ ವಿರೋಧಿ ಸಮಾಜ ನಿರ್ಮಾಣವಾಗಲಿದೆ. ನಾಡು ಕಟ್ಟಲು ಪ್ರಯತ್ನಿಸಿದವರನ್ನು ವಿರೋಧಿಸಲು ಪಟ್ಟಿ ಮಾಡಲಾಗುತ್ತಿದೆ. ಭಿನ್ನಮತಗಳನ್ನು ಸಂವಾದದಿಂದ ಬಗೆಹರಿಸಿಕೊಳ್ಳಬೇಕು ಎಂದರು.
ಏಕಾಭಿಪ್ರಾಯದಲ್ಲಿ ದೇಶ ಕಟ್ಟಲಾಗುವುದಿಲ್ಲ. ಗಾಂಧೀಜಿ ಭಿನ್ನಮತದ ಮೂಲಕ ದೇಶ ಕಟ್ಟಿದವರು. ನೆಹರೂ, ಟ್ಯಾಗೋರ್, ಅಂಬೇಡ್ಕರ್ ಅವರೊಂದಿಗೆ ತಾತ್ವಿಕವಾಗಿ ಜಗಳ ಮಾಡಿದರು. ಇವತ್ತು ಸಂವಾದ ಸಂಸ್ಕೃತಿ ಅಳಿದು ಹೋಗುತ್ತಿದೆ ಎಂದು ತಿಳಿಸಿದರು.
ದೇಶದ ಶೇ.೮೫ ಮಾಧ್ಯಮಗಳು ಮಾರಾಟವಾಗಿವೆ. ಗಾಂಧಿ-ಅಂಬೇಡ್ಕರ್ ಪತ್ರಿಕೋದ್ಯಮ ಏನಾಗಿರಬೇಕು ಎಂದು ದಿಕ್ಸೂಚಿ ಕೊಟ್ಟಿದ್ದಾರೆ. ಅದನ್ನು ಮುಂದುವರಿಸಬೇಕಿದೆ ಎಂದು ಹೇಳಿದರು.
ಗಾಂಧೀಜಿ ಎಲ್ಲ ಭಾಷೆಯಲ್ಲಿ ಸಹಿ ಮಾಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ ೨೫ನೇ ವರ್ಷದ ಆಡಳಿತದ ನೆನಪಿನಲ್ಲಿ ಕನ್ನಡ, ಇಂಗ್ಲಿಷ್‌ನಲ್ಲಿ ಸ್ವಹಸ್ತಕ್ಷರದಲ್ಲಿ ಪತ್ರ ಬಿಡುಗಡೆ ಮಾಡುತ್ತಾರೆ. ಇಂಥ ಒಳಗೊಳ್ಳುವ ವಿಷಯಗಳು ನಮಗೆ ಮುಖ್ಯವಾಗಬೇಕು. ಏಕರೂಪಿ ಹೋರಾಟದಿಂದ ಬದಲಾವಣೆ ಇಲ್ಲ. ಒಂದು ಸಿದ್ಧಾಂತ ನಮ್ಮನ್ನು ಬಿಡುಗಡೆ ಮಾಡುವುದಿಲ್ಲ. ಸಂವಾದ ಪರಸ್ಪರ ಕೊಡುಕೊಳ್ಳುವಿಕೆಯಿಂದ ಬಿಡುಗಡೆ ಸಾಧ್ಯವಿದೆ. ಚಳವಳಿ ಛಿದ್ರೀಕರಣ, ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ನಡೆಯುತ್ತಿದೆ ಎಂದರು.
ಪ್ರಸ್ತುತ ಶಿಕ್ಷಣ ಮತ್ತು ವಿದ್ಯಾಭ್ಯಾಸವನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಕೋವಿಡ್ ಕಾಲದಲ್ಲಿಯೇ ಬಿಲೇನಿಯರ್‌ಗಳ ಸಂಖ್ಯೆ ಏರಿಕೆಯಾಗಿದೆ. ಚುನಾಯಿತ ಪ್ರತಿನಿಧಿಗಳು ಬಹಿರಂಗವಾಗಿ ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇದನ್ನು ತಡೆಯುವುದು ಹೇಗೆ ಎಂದು ಆಲೋಚಿಸಬೇಕಿದೆ. ಮಹಿಳೆ, ದಲಿತ, ಮುಸ್ಲಿಂ ಬೀದಿ ಒಡೆತ ತಿನ್ನುತ್ತಿದ್ದಾರೆ. ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ಚಳವಳಿ ಆರಂಭಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವೆ ಪ್ರೊ.ವಿ.ಆರ್.ಶೈಲಜಾ, ಮಣಿಪುರ ಸಂಘರ್ಷ, ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಘಟನೆಗಳಿಂದ ನಾವು ಬಹಳ ಹಿಂದೆ ಇದ್ದೇವೆ, ದ್ವೀಪಗಳಾಗಿ ಬೆಳೆಯುತ್ತಿದ್ದೇವೆ ಅನಿಸುತ್ತದೆ. ಆಲೋಚನೆ ಮತ್ತು ಆಚರಣೆ ಒಂದಾಗಬೇಕು. ಕಂದಕ ದೊಡ್ಡದಾಗುತ್ತ ಹೋಗುತ್ತಿದೆ ಎಂದರು.
ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್, ಸಕಾಲ ಸ್ಪಂದನದ ಪ್ರೊ.ಆರ್.ಎಂ. ಚಿಂತಾಮಣಿ ಹಾಜರಿದ್ದರು.