Saturday, April 19, 2025
Google search engine

Homeಸ್ಥಳೀಯಸಿದ್ದರಾಮಯ್ಯ ಹುಟ್ಟಹಬ್ಬ: ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಸಿದ್ದರಾಮಯ್ಯ ಹುಟ್ಟಹಬ್ಬ: ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ

ಮೈಸೂರು: ರಾಜ್ಯದ ಬಡಜನರ ಆದಾಯ ವೃದ್ಧಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.

ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾಡಿನ ಶೋಷಿತ ಸಮುದಾಯಗಳ ಪರ ಅಪಾರ ಗೌರವ ಹೊಂದಿರುವ ಸಿದ್ದರಾಮಯ್ಯ ಅವರು ಈ ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗಿನಿಂದಲೂ ಹಲವಾರು ಭಾಗ್ಯಗಳ ಮೂಲಕ ಬಡವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಇಂದಿಗೂ ಅನೇಕ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯಿಲ್ಲ. ಬಡವರು ದುಡಿಯುವ ಅತ್ಯಲ್ಪ ಆದಾಯವನ್ನು ಉಳಿತಾಯ ಮಾಡಲು ಇಂತಹ ಯೋಜನೆಗಳು ಅವಶ್ಯಕ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಕೆ.ಸೋಮಶೇಖರ್ ಮಾತನಾಡಿ, ಬಡಜನರ ಆದಾಯ ಹೆಚ್ಚು ಮಾಡುವಂತಹ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಬೇಕು. ಮಹಿಳೆಯರ ಸಬಲೀಕರಣಕ್ಕೆ ಈ ಯೋಜನೆ ಹೆಚ್ಚು ಒತ್ತು ನೀಡುತ್ತದೆ. ಇದನ್ನು ಕರ್ನಾಟಕ ಮಾಡಲ್ ಎಂದೇ ಹೇಳಬಹುದು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ಸಿದ್ದರಾಮಯ್ಯ ಅವರ ಸಾಮಾಜಿಕ ಕಳಕಳಿಯಿಂದ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಬಳಿಕವೂ ಹಲವಾರು ಭಾಗ್ಯಗಳ ಮೂಲಕ ಬಡಜನರ ಏಳಿಗೆಗೆ ಶ್ರಮಿಸಿದರು. ಈಗ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿಗಳು ಬಡವರನ್ನು ಮುಖ್ಯವಾಹಿನಿಗೆ ತರಲು ಸಹಕಾರಿಯಾಗುತ್ತದೆ. ಗ್ಯಾರಂಟಿ ಯೋಜನೆಯಿಂದ ಜನರ ಬದುಕು ಸಮೃದ್ಧಿಯಾಗುತ್ತದೆ. ಆದರೆ, ಕೆಲವರು ಇದಕ್ಕೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಡ ಜನರಿಗೆ ಹಣ ನೀಡುವುದರಿಂದ ರಾಜ್ಯ ದಿವಾಳಿ ಆಗುತ್ತದೆ ಎಂಬುದು ಸುಳ್ಳು. ಏಕೆಂದರೆ ಬಡವರು ಕೂಡ ಪರೋಕ್ಷತೆರಿಗೆ ಪಾವತಿಸುತ್ತಾರೆ. ಮಕ್ಕಳು ಈ ದೇಶದ ಸಂಪತ್ತು. ಯುವ ಜನರ ಸ್ವಯಂ ಉದ್ಯೋಗಕ್ಕಾಗಿ ಸಿದ್ದರಾಮಯ್ಯ ಅವರು ಈ ಹಿಂದೆ ಕೌಶಲ್ಯ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದರು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಶೋಷಿತರ ಧ್ವನಿಯಾಗಿರುವ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಹಾಗೂ ಮಕ್ಕಳ ಕಲೆಗೆ ಉತ್ತೇಜನ ನೀಡಬೇಕು ಎಂದು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಂದ ಸುಮಾರು ೧೦೦೦ ಕ್ಕೂ ಅಧಿಕ ಮಕ್ಕಳು ಭಾಗವಹಿಸಿದರು. ೧ ರಿಂದ ೧೦ನೇ ತರಗತಿ ಎ ತಂಡ, ಪಿಯುಸಿ ಬಿ ತಂಡ ಹಾಗೂ ಪದವೀಧರ ಸಿ ತಂಡ ಹೀಗೆ ಒಟ್ಟು ಮೂರು ತಂಡಗಳಾಗಿ ವಿಭಾಗಿಸಿ ಸ್ಪರ್ಧೆ ಆಯೋಜಿಸಲಾಗಿತ್ತು. ಗೆದ್ದ ಪ್ರತಿ ತಂಡಕ್ಕೂ ಪ್ರಥಮ ಬುಹುಮಾನ ೭೦೦೦, ದ್ವಿತೀಯ ೫೦೦೦ ಹಾಗೂ ತೃತೀಯ ೩೦೦೦ ನೀಡಲಾಯಿತು. ಅಲ್ಲದೇ ಪ್ರತಿ ಗುಂಪಿನ ಹತ್ತು ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸಮಾರಂಭದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷಪ್ರೊ.ವೈ.ಎಸ್.ಸಿದ್ದೇಗೌಡ ಸಾಹಿತ್ಯ ಪರಿಷತ್ತಿನ ಮಡ್ಡಿಕೆರೆ ಗೋಪಾಲ್, ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ, ವೆಂಕಟೇಶ್, ರಘುರಾಮ್ ವಾಜಪೇಯಿ, ಬಾಬು ರಾವ್, ರಂಗಪ್ಪ, ಶಿವಣ್ಣ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular