Saturday, July 4, 2026
Google search engine

Homeರಾಜ್ಯಕೊಡಗಿನಲ್ಲಿ ವರುಣನ ಆರ್ಭಟ : ಕಾವೇರಿ ನದಿ ನೀರಿನ ಮಟ್ಟ ದಿಢೀರ್ ಏರಿಕೆ, ನದಿ ತೀರದ...

ಕೊಡಗಿನಲ್ಲಿ ವರುಣನ ಆರ್ಭಟ : ಕಾವೇರಿ ನದಿ ನೀರಿನ ಮಟ್ಟ ದಿಢೀರ್ ಏರಿಕೆ, ನದಿ ತೀರದ ಜನರಲ್ಲಿ ಆತಂಕ

ಕುಶಾಲನಗರ : ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಕಾವೇರಿ ನದಿಯ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಕುಶಾಲನಗರ–ಕೊಪ್ಪ ಗಡಿ ಭಾಗದಲ್ಲಿರುವ ಕಾವೇರಿ ಸೇತುವೆಯ ಕೆಳಭಾಗದಲ್ಲಿ ಶುಕ್ರವಾರ ಸಂಜೆ ವೇಳೆಗೆ ನೀರಿನ ಮಟ್ಟ ಸುಮಾರು ಐದು ಅಡಿಗಳಷ್ಟು ಏರಿಕೆಯಾಗಿದೆ. ನದಿಯ ಉಗಮ ಸ್ಥಾನಗಳಾದ ಭಾಗಮಂಡಲ ಹಾಗೂ ತಲಕಾವೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಮುಂದುವರಿದಿರುವುದರಿಂದ, ಕಾವೇರಿ ನದಿಯ ನೀರಿನ ಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಗುರುವಾರವೊಂದೇ ದಿನ ಭಾಗಮಂಡಲ–ತಲಕಾವೇರಿ ವ್ಯಾಪ್ತಿಯಲ್ಲಿ 33.2 ಮಿಲಿಮೀಟರ್ ಮಳೆಯಾಗಿರುವುದು ದಾಖಲಾಗಿದೆ.

ಕಳೆದ ವರ್ಷದ ಭೀತಿ

ಕಳೆದ ವರ್ಷ ಇದೇ ಅವಧಿಯಲ್ಲಿ ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ಸುಮಾರು 23 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿದು ಪ್ರವಾಹದ ಭೀತಿ ಸೃಷ್ಟಿಸಿದ್ದನ್ನು ಸ್ಥಳೀಯರು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಮಳೆಯ ಪ್ರಮಾಣ ಮತ್ತೆ ಹೆಚ್ಚುತ್ತಿರುವುದು ಸ್ಥಳೀಯ ಆಡಳಿತಕ್ಕೂ ಎಚ್ಚರಿಕೆಯ ಗಂಟೆಯಾಗಿದೆ.

ಮಳೆ ಪ್ರಮಾಣದ ವಿವರ

ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ಈ ಮಳೆಗಾಲದಲ್ಲಿ ಇದುವರೆಗೆ ಒಟ್ಟು 205.69 ಮಿಲಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 796.54 ಮಿಲಿಮೀಟರ್‌ನಷ್ಟು ಭಾರಿ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಟ್ಟಾರೆ ಮಳೆಯ ಪ್ರಮಾಣ ಕಡಿಮೆಯಿದ್ದರೂ, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯೇ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾಗಲು ಪ್ರಮುಖ ಕಾರಣವಾಗಿದೆ.

ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಇನ್ನೊಂದೆಡೆ, ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿಗೂ ಒಳಹರಿವು ಹೆಚ್ಚಳವಾಗುತ್ತಿದೆ. ಶುಕ್ರವಾರ ಸಂಜೆ ವೇಳೆಗೆ ಜಲಾಶಯಕ್ಕೆ 1113 ಕ್ಯೂಸೆಕ್ ಪ್ರಮಾಣದ ನೀರು ಹರಿದುಬರುತ್ತಿದ್ದು, ಸದ್ಯ ಜಲಾಶಯದಲ್ಲಿ 3.3 ಟಿಎಂಸಿ ನೀರು ಸಂಗ್ರಹವಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 2853 ಅಡಿಗಳಷ್ಟು ನೀರಿನ ಸಂಗ್ರಹವಿತ್ತು.

ಆಡಳಿತ ಮಂಡಳಿಯಿಂದ ಎಚ್ಚರಿಕೆ

ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ತಟದ ಪ್ರದೇಶಗಳ ನಿವಾಸಿಗಳು ಜಾಗರೂಕರಾಗಿರಬೇಕು ಎಂದು ಸ್ಥಳೀಯ ಆಡಳಿತ ಸೂಚಿಸಿದೆ. ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾದರೆ ನದಿ ನೀರಿನ ಮಟ್ಟವೂ ಅಪಾಯದ ಮಟ್ಟ ಮೀರುವ ಸಾಧ್ಯತೆ ಇರುವುದರಿಂದ, ನದಿ ತಟದ ಗ್ರಾಮಗಳ ಮೇಲೆ ವಿಶೇಷ ನಿಗಾವಹಿಸಲಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular