ನವದೆಹಲಿ : ಭಾರತೀಯ ಹವಾಮಾನ ಇಲಾಖೆ (IMD) ಇಂದು ದೇಶದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕ, ಗುಜರಾತ್, ಕೊಂಕಣ, ಗೋವಾ ಮತ್ತು ಮಧ್ಯ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಇಂದು ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಹಲವು ರಾಜ್ಯಗಳಲ್ಲಿ ಸುರಿಯಲಿದೆ ಭಾರೀ ಮಳೆ
ಕರಾವಳಿ ಕರ್ನಾಟಕ ಮಾತ್ರವಲ್ಲದೆ, ದೇಶದ ಇತರ ಭಾಗಗಳಲ್ಲೂ ಮಳೆ ಆರ್ಭಟಿಸಲಿದೆ.
ಭಾರೀ ಮಳೆಯಾಗುವ ಇತರ ಪ್ರದೇಶಗಳು: ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಪೂರ್ವ ರಾಜಸ್ಥಾನ, ಹಿಮಾಚಲ ಪ್ರದೇಶ, ಒಳನಾಡು ಕರ್ನಾಟಕ, ಮಧ್ಯಪ್ರದೇಶ, ಉಪ-ಹಿಮಾಲಯನ್ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ.
ದೆಹಲಿ ಸೇರಿದಂತೆ ಹಲವೆಡೆ ಸಾಧಾರಣ ಮಳೆ
ದೆಹಲಿ, ಹರಿಯಾಣ, ಚಂಡೀಗಢ, ಈಶಾನ್ಯ ಭಾರತದ ಕೆಲವು ಭಾಗಗಳು, ಒಡಿಶಾ, ಪಂಜಾಬ್ ಮತ್ತು ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಲಘುವಾದ ಅಥವಾ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಸಿಡಿಲು, ಬಿರುಗಾಳಿಯ ಎಚ್ಚರಿಕೆ
ಹವಾಮಾನ ಇಲಾಖೆಯ ಪ್ರಕಾರ, ಇಂದು ಕರ್ನಾಟಕ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಬಲವಾದ ಗಾಳಿ (Thunder squalls) ಬೀಸುವ ಸಾಧ್ಯತೆಯಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ, ಬಿಹಾರ, ಗಂಗಾ ನದಿ ಪಾತ್ರದ ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಸಿಡಿಲು ಮತ್ತು ಮಿಂಚು ಸಹಿತ ಭಾರೀ ಗುಡುಗು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಭಾಗದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.



