Tuesday, July 7, 2026
Google search engine

Homeಕಲೆ-ಸಾಹಿತ್ಯಕನ್ನಡದಲ್ಲೇ ಕೈಬರಹದಿಂದ 10ಸಾವಿರ ಸುವಿಚಾರ ಬರೆದು ಇಂಡಿಯಾ ಬುಕ್ಆಫ್ ರೆಕಾರ್ಡ್ಸ್ ಸೇರಿದ ಬೆಳಗಾವಿಯ ಎಂಜಿನಿಯರ್ ಗೋಪಾಲ್‌...

ಕನ್ನಡದಲ್ಲೇ ಕೈಬರಹದಿಂದ 10ಸಾವಿರ ಸುವಿಚಾರ ಬರೆದು ಇಂಡಿಯಾ ಬುಕ್ಆಫ್ ರೆಕಾರ್ಡ್ಸ್ ಸೇರಿದ ಬೆಳಗಾವಿಯ ಎಂಜಿನಿಯರ್ ಗೋಪಾಲ್‌ ದೇಶಪಾಂಡೆ.

ವರದಿ: ಸ್ಟೀಫನ್ ಜೇಮ್ಸ್.

ಬೆಳಗಾವಿಯ 54 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಗೋಪಾಲ ದೇಶಪಾಂಡೆ ಅವರು ಕನ್ನಡದಲ್ಲಿ ತಮ್ಮ ಕೈಬರಹ ಸುಧಾರಿಸಿಕೊಳ್ಳಲು ಆರಂಭಿಸಿದ ಹವ್ಯಾಸದಿಂದಾಗಿ ಇದೀಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸೇರಿ ರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ. 2023ರಲ್ಲಿ ಹೆದ್ದಾರಿಯ ಚಹಾ ಅಂಗಡಿಯೊಂದರ ಸುವಿಚಾರದ ಫಲಕದಿಂದ ಪ್ರೇರಣೆ ಪಡೆದ ಇವರು, ನಿರಂತರ 3 ವರ್ಷಗಳ ಕಾಲ ಪ್ರಯಾಣದ ವೇಳೆಯೂ ಬರವಣಿಗೆ ಮುಂದುವರಿಸಿ 2026ರ ಮೇ ತಿಂಗಳಲ್ಲಿ ಸುಮಾರು 1,430 ಪುಟಗಳಲ್ಲಿ ಕೈಬರಹದಲ್ಲೇ 10,000 ಪ್ರೇರಣಾದಾಯಕ ಸುವಿಚಾರಗಳನ್ನು ಬರೆದು ಮುಗಿಸಿದ್ದು, ತಮ್ಮ ಬೃಹತ್ ಕೈಬರಹದ ಸಂಗ್ರಹದೊಂದಿಗೆ ಸಾಧನೆ ಮಾಡಿದ್ದಾರೆ.

ಬೆಳಗಾವಿ: ಕನ್ನಡದಲ್ಲಿ ಕೈಬರಹ ಸುಧಾರಿಸಿಕೊಳ್ಳಬೇಕೆಂಬ ಸಂಕಲ್ಪದಿಂದ ಆರಂಭವಾದ ಅಭ್ಯಾಸವು ಬೆಳಗಾವಿಯ ಎಂಜಿನಿಯರ್‌ ಒಬ್ಬರಿಗೆ ರಾಷ್ಟ್ರೀಯ ಮನ್ನಣೆ ತಂದುಕೊಟ್ಟಿದೆ. ಮೂರು ವರ್ಷ ನಿರಂತರವಾಗಿ 10 ಸಾವಿರ ಪ್ರೇರಣಾದಾಯಕ, ಸುವಿಚಾರದ ಹೇಳಿಕೆಗಳನ್ನು ಕೈಬರಹದಲ್ಲಿ ಬರೆದ ಅವರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ನಗರದ ನ್ಯೂ ಗೂಡ್ಸ್‌ಶೆಡ್‌ ರಸ್ತೆ ನಿವಾಸಿ, 54 ವರ್ಷದ ಎಂಜಿನಿಯರ್‌ ಗೋಪಾಲ ದೇಶಪಾಂಡೆ 10 ಸಾವಿರ ಹೇಳಿಕೆಗಳ ಬರಹದಿಂದಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್ ದಾಖಲೆ ಬರೆದವರು. ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ‌ ಎಸ್‌ಎಸ್‌ಎಲ್‌ಸಿವರೆಗೆ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿರುವ ಅವರು, ಮೆಕ್ಯಾನಿಕಲ್‌ ಎಂಜಿನಿಯರ್‌ ಪದವಿ ಪೂರೈಸಿದ್ದಾರೆ. ಆದರೆ, ನೆಲ ಹಾಗೂ ಭಾಷೆಯ ಮೇಲಿನ ಅಭಿಮಾನದಿಂದ ದುಪ್ಪಟ್ಟು ವೇತನದ ವಿದೇಶಿ ನೌಕರಿ ಅವಕಾಶಗಳನ್ನು ತಿರಸ್ಕರಿಸಿ, ಸ್ವದೇಶದಲ್ಲೇ ಬದುಕು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ.

ಮಾತೃಭಾಷೆಯ ಮೇಲಿನ ಪ್ರೀತಿ

ಬೆಳಗಾವಿಯಲ್ಲಿರುವ ಪಾಲಿ ಹೈಡ್ರಾನ್‌ ಸಮೂಹದ ಹೈಲಾಕ್‌ ಸಂಸ್ಥೆಯಲ್ಲಿ 35 ವರ್ಷಗಳಿಂದ ಮುಖ್ಯ ಎಂಜಿನಿಯರ್‌ (ಡಿಸೈನ್‌ ಮತ್ತು ಡೆವಲಪ್‌ಮೆಂಟ್‌) ಆಗಿ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು, ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌) ಹಾಗೂ ಐಎಸ್‌ಒ ಸಮಿತಿಯ ಫ್ಲೂಯಿಡ್‌ ಪವರ್‌ ವಿಭಾಗದ ಕ್ರಿಯಾಶೀಲ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ದೊಡ್ಡ ಸ್ಥಾನಕ್ಕೇರಿದರೂ ಮಾತೃಭಾಷೆ ಕನ್ನಡದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ ಎಂಬುದು ಗಮನಾರ್ಹ.

ಹೆದ್ದಾರಿ ಬದಿಯ ಚಹಾ ಅಂಗಡಿಯ ಸ್ಪೂರ್ತಿಯಿಂದ ಹುಟ್ಟಿದ ಸುವಿಚಾರ ಬರೆಯುವ ಅಭ್ಯಾಸ

ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ತಮ್ಮ ಕೈಬರಹವನ್ನು ಉತ್ತಮಗೊಳಿಸಬೇಕು ಎಂಬ ಉದ್ದೇಶದಿಂದ ಪತ್ರಿಕೆಗಳ ಸಂಪಾದಕೀಯ, ಕವನ ಹಾಗೂ ಸಣ್ಣ ಕಥೆಗಳನ್ನು ಪುನಃ ಬರೆಯುವ ರೂಢಿ ಆರಂಭಿಸಿದರು. 2023ರಲ್ಲಿ ಒಂದೊಮ್ಮೆ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚಹಾ ಕುಡಿಯಲು ನಿಂತಾಗ, ಆ ಅಂಗಡಿಯವ ಅಲ್ಲಿ ಪ್ರತಿದಿನ ಹೊಸ ಸುವಿಚಾರವೊಂದನ್ನು ಬರೆದು ಹಾಕುತ್ತಿದ್ದ ಫಲಕ ಅವರ ಗಮನ ಸೆಳೆಯಿತು. ಅಂಗಡಿ ಮಾಲೀಕರೊಂದಿಗೆ ಮಾತನಾಡಿದ ಬಳಿಕ ತಾವೂ ಪ್ರತಿದಿನ ಸುವಿಚಾರಗಳನ್ನು ಬರೆಯುವ ಸಂಕಲ್ಪ ಮಾಡಿದರಂತೆ.

ಮೊದಲಿಗೆ ಒಂದು ಸಣ್ಣ ಡೈರಿಯಲ್ಲಿ ಸುವಿಚಾರಗಳನ್ನು ಬರೆಯಲು ಆರಂಭಿಸಿದ ಅವರು, ನಂತರ ಪ್ರತಿದಿನ ತಲಾ ಹತ್ತು ಸುವಿಚಾರಗಳನ್ನು ಬರೆಯುವ ಗುರಿ ಇಟ್ಟುಕೊಂಡರು. ವಿವಿಧ ಕನ್ನಡ ಪತ್ರಿಕೆಗಳು ಹಾಗೂ ಇತರ ಮೂಲಗಳಿಂದ ಪ್ರೇರಣಾದಾಯಕ ವಿಚಾರಗಳನ್ನು ಸಂಗ್ರಹಿಸಿ ಪುಸ್ತಕದಲ್ಲಿ ಬರೆಯುತ್ತ ಬಂದರು. ಉದ್ಯೋಗದ ನಿಮಿತ್ತ ಪ್ರಯಾಣಿಸುತ್ತಿದ್ದಾಗಲೂ ಆ ಪುಸ್ತಕ ಹೊತ್ತು ಸಾಗುತ್ತಿದ್ದ ಗೋಪಾಲ, ರೈಲು ಮತ್ತು ವಿಮಾನಗಳಲ್ಲಿ ಪ್ರಯಾಣಿಸುವ ಸಂದರ್ಭಗಳಲ್ಲಿಯೂ ಬರವಣಿಗೆಯನ್ನು ನಿರಂತರವಾಗಿ ಮುಂದುವರಿಸಿದರು.


ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸಾಧನೆ

ಹೀಗೆ 2023ರಲ್ಲಿ ಆರಂಭವಾದ ಸುಂದರ ಅಕ್ಷರಗಳಲ್ಲಿ ಸುವಿಚಾರ ಬರೆಯುವ ಇವರ ಅಭ್ಯಾಸ 2026ರ ಮೇ ತಿಂಗಳ ಮೊದಲ ವಾರದಲ್ಲಿ 10 ಸಾವಿರ ಸುವಿಚಾರಗಳನ್ನು ಪೂರ್ಣಗೊಳಿಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದೆ. ಬಳಿಕ ಅವರು ಸುಮಾರು 1,430 ಪುಟಗಳ ಕೈಬರಹದ ಸಂಗ್ರಹವನ್ನು ಸ್ಕ್ಯಾನ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸಲ್ಲಿಸಿದ್ದು, ಇದನ್ನು ಪರಿಶೀಲನೆ ಮತ್ತು ಸಂದರ್ಶನದ ಬಳಿಕ ಅವರನ್ನು ರಾಷ್ಟ್ರೀಯ ದಾಖಲೆದಾರರಾಗಿ ಗುರುತಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.

RELATED ARTICLES
- Advertisment -
Google search engine

Most Popular