ಮಂಡ್ಯ: ಕಲ್ಲು ಗಣಿಗಾರಿಕೆ ಅವಕಾಶ ನೀಡದಂತೆ ಅಧಿಕಾರಿಗಳ ಮುಂದೆ ರೈತನೋರ್ವ ವಿಷ ಕುಡಿದಿದ್ದು, ಅಸ್ವಸ್ಥಗೊಂಡ ರೈತನನ್ನು ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಂಕನಹಳ್ಳಿ ಗ್ರಾಮದ ರಾಮಚಂದ್ರ ವಿಷ ಸೇವಿಸಿದ ರೈತ.
ಈ ಗ್ರಾಮದ ಸರ್ವೇ ನಂ 54 ರಲ್ಲಿ ಕಲ್ಲು ಗಣಿಗಾರಿಕೆಗೆ ಗಣಿ ಇಲಾಖೆ ಅನುಮತಿ ನೀಡಿದೆ. ಈ ಹಿನ್ನಲೆ ಗಣಿಗಾರಿಕೆಯ ಜಾಗವನ್ನು ಅಳತೆ ಮಾಡಲು ಹೋದ ವೇಳೆ ಅಧಿಕಾರಿಗಳ ಕಾರ್ಯಕ್ಕೆ ರೈತರು ಅಡ್ಡಿಪಡಿಸಿದ್ದಾರೆ.
ಈ ಜಾಗದಲ್ಲಿ ರೈತ ಕುಟುಂಬ 30 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದೆ. ಇದೀಗ ಕಲ್ಲು ಗಣಿಗಾರಿಕೆಗೆ ಅವ ಕಾಶ ನೀಡಿ, ರೈತ ಕುಟುಂಬದ ಕೃಷಿ ಕಾರ್ಯಕ್ಕೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಜಾಗದಲ್ಲಿ ಕಲ್ಲುಗಣಿಗಾರಿಕೆ ಅವಕಾಶ ನೀಡಬಾರದೆಂದು ರೈತ ಕುಟುಂಬ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದೆ. ಆದರೆ ಅಧಿಕಾರಿಗಳು ರೈತ ಕುಟುಂಬದ ಮನವಿಯನ್ನು ಧಿಕ್ಕರಿಸಿ ಜಾಗದ ಅಳತೆಗೆ ಮಾಡಲು ಹೋಗಿದ್ದಾರೆ.
ಅಧಿಕಾರಿಗಳ ದೌರ್ಜನ್ಯದ ವರ್ತನೆಗೆ ಬೇಸತ್ತು ಕೃಷಿ ಮಾಡಿ ಬದುಕಲು ನಮಗೆ ಅವಕಾಶ ಕೊಡಿ, ಇಲ್ಲದಿದ್ದರೆ ಸಾಯಲು ಬಿಡಿ ಎಂದು ರೈತ ಅಧಿಕಾರಿಗಳ ಮುಂದೆಯೇ ವಿಷ ಕುಡಿದಿದ್ದಾನೆ. ತಕ್ಷಣವೇ ವಿಷ ಕುಡಿದ ರೈತನನ್ನು ಅಧಿಕಾರಿಗಳು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಣಿ ಅಧಿಕಾರಿಗಳು ಬಡ ರೈತ ಕುಟುಂಬದ ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ.