ಗುಂಡ್ಲುಪೇಟೆ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿರುವ ಘಟನೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದ ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಸವಾಪುರ ಗ್ರಾಮ ವ್ಯಾಪ್ತಿಯ ಸಲೀಂ ಎಂಬುವರಿಗೆ ಸೇರಿದ ಸರ್ವೇ ನಂ. 4/6ರ ಜಮೀನಿನಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದ್ದು, ಅಂದಾಜು ಸುಮಾರು 2 ವರ್ಷ ಪ್ರಾಯದ ಗಂಡು ಚಿರತೆಯಾಗಿದೆ. ಕಳೆದ ಹಲವು ದಿನಗಳಿಂದ ಬಸವಾಪುರ ಗ್ರಾಮದ ಸುತ್ತಮುತ್ತಲು ಚಿರತೆ ಓಡಾಟದ ಆತಂಕವನ್ನು ರೈತರು ಹೊರಹಾಕಿದ್ದರಿಂದ ಅರಣ್ಯ ಇಲಾಖೆಯವರು ಬೋನಿಟ್ಟು ನಾಯಿ ಕಟ್ಟಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ.
ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ರೈತರಿಂದ ಅರಿತ ಬಫರ್ ಜೋನ್ ವಲಯದ ಅರಣ್ಯಾಧಿಕಾರಿಗಳು ಆಗಮಿಸಿ, ಚಿರತೆಯನ್ನು ಕೊಂಡೊಯ್ದು ಮೂಲೆಹೊಳೆ ಅಭಯಾರಣ್ಯದ ಮಧ್ಯೆ ಭಾಗದಲ್ಲಿ ಬಿಟ್ಟಿದ್ದಾರೆ.



