ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ನಗರದ ಸ್ಚಚ್ಛತೆಗೆ ನಗರಸಭೆ ಅಧಿಕಾರಿಗಳು ಆದ್ಯತೆ ನೀಡಬೇಕು. ಈಗಿನ ತ್ಯಾಜ್ಯ ವಿಲೇವಾರಿ ನಿರ್ವಹಣಾ ವ್ಯವಸ್ಥೆ ಅತ್ಯಂತ ಕಳೆಪೆಯಾಗಿದೆ. ನಗರದ ಸ್ವಚ್ಛತೆ ಬಗ್ಗೆ ಗಮನ ವಹಿಸದೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ನಿರ್ದಾಕ್ಷಣ್ಯವಾಗಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದರು.
ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ ಅವರು, ಮುಂಜಾನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ನಡೆಸಿ, ಬಳಿಕ ಕಲುಷಿತ ನೀರು ಪ್ರಕರಣದಲ್ಲಿ ಸಾರ್ವಜನಿಕರು ಅಸ್ವಸ್ಥಗೊಂಡ ಕವಾಡಿಗರ ಹಟ್ಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.
ಚಿತ್ರದುರ್ಗ ನಗರದ ತ್ಯಾಜ್ಯ ವಿಲೇವಾರಿ ನಿರ್ವಹಣೆ, ಸ್ವಚ್ಛತೆ ದಯನೀಯ ಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿಯಲ್ಲಿ ಜನರಿಗೆ ಯಾವುದೇ ರೋಗ ರುಜಿನಗಳು ಬರಬಹುದು. ಸಾಂಕ್ರಮಿಕ ರೋಗಗಳು ಹರಡಬಹುದು. ಜನರ ಜೀವಕ್ಕೆ ಅಪಾಯವಾಗಬಹುದು. ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್, ಉಳಿದ ಆಹಾರಗಳನ್ನು ಜನರು ಚೆಲ್ಲುತ್ತಿದ್ದಾರೆ. ಖಾಲಿ ನಿವೇಶನಗಳು ತ್ಯಾಜ್ಯ ಸುರಿಯುವ ಸ್ಥಳಗಳಾಗಿ ಬದಲಾಗಿವೆ. ಇಂತಹ ಸ್ಥಳಗಳ ಪೋಟೋ ತೆಗೆದುಕೊಂಡು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು ಮೂರು ದಿನಗಳ ನಂತರ ಮತ್ತೆ ಈ ಸ್ಥಳಗಳಿಗೆ ಭೇಟಿ ನೀಡಿ, ಪೋಟೋ ಸಹಿತ ವರದಿಯನ್ನು ಕಳುಹಿಸಿಕೊಡುವರು. ಅಧಿಕಾರಿಗಳು ಎಚ್ಚೆತ್ತು ಕೆಲಸ ನಿರ್ವಹಿಸದೇ ಹಾಗೇ ಮುಂದುವರಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಹೊಳೆಲ್ಕೆರೆ ರಸ್ತೆಯಲ್ಲಿ ದೊಡ್ಡ ಚರಂಡಿಯಲ್ಲಿ ಗಿಡ ಗಂಟೆಗಳು ಬೆಳೆದು ಸರಾಗವಾಗಿ ನೀರು ಹರಿದುಹೋಗಲು ತೊಂದರೆಯಾಗುತ್ತಿರುವುದನ್ನು ಗಮನಿಸಲಾಗಿದೆ, ಇಲ್ಲಿ ಸೊಳ್ಳೆ, ನೋಣಗಳು ಹುಟ್ಟಿ ರೋಗ ಹರಡಲು ದಾರಿಯಾಗುತ್ತದೆ. ಚರಂಡಿ ಸ್ವಚ್ಛಗೊಳಿಸಲು ಯಾವುದೇ ಅನುದಾನ ಬೇಕಿಲ್ಲ. ಇದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪ್ರತೀಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.
ನಗರದಲ್ಲಿ ಖಾಲಿ ಇರುವ ನಿವೇಶನಗಳ ಮಾಲೀಕರಿಗೆ ನಗರಸಭೆ ವತಿಯಿಂದ ನೋಟಿಸ್ ನೀಡಿ, ಖಾಲಿ ನಿವೇಶಗಳನ್ನು ಸ್ವಚ್ಛಗೊಳಿಸುವಂತೆ ತಾಕೀತು ಮಾಡಬೇಕು. ಮಾಲಿಕರು ಸ್ವಚ್ಛಗೊಳಿಸದೇ ಇದ್ದರೆ, ನಗರ ಸಭೆಯಿಂದಲೇ ಸ್ವಚ್ಛಗೊಳಿಸಿ ದಂಡ ಸಹಿತವಾಗಿ ಮಾಲಿಕರಿದಂದ ಹಣ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸದೇ ಇದ್ದಲ್ಲಿ, ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು ಎಂದರು. ಕವಾಡಿಗರಹಟ್ಟಿಯಲ್ಲಿನ ಕಲುಷಿತ ನೀರು ಸೇವಿಸಿ 5 ಜನ ಮೃತಪಟ್ಟಿದ್ದಾರೆ. ತಜ್ಞರ ತಂಡ ಪರಿಶೀಲನೆ ನಡೆಸಿ ವರದಿ ನೀಡಲಿದೆ. ಹಟ್ಟಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್, ಚರಂಡಿ, ಹಾಗೂ ಶೌಚಾಲಯ ಗುಂಡಿಗಳು ಪಕ್ಕ ಪಕ್ಕದಲ್ಲಿ ಹಾದು ಹೋಗಿವೆ. ಪೈಪ್ ಲೈನ್ ಹೊಡೆದು ನೀರು ಕಲುಷಿತಗೊಳ್ಳುವ ಸಂಭವ ಹೆಚ್ಚಿದೆ. ಕವಾಡಿಗರ ಹಟ್ಟಿಯಲ್ಲಿ ಇನ್ನೂ ಬಯಲು ಶೌಚ ಪದ್ದತಿಯಿದೆ. ಈ ಎಲ್ಲಾ ಕಾರಣಗಳಿಂದ ಕಾಲರಾ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಸಂಪೂರ್ಣ ತನಿಖಾ ವರದಿ ಬಂದ ನಂತರ ಘಟನೆಯ ಸತ್ಯಾಂಶ ಹೊರಬರಲಿದೆ. ಸಾರ್ವಜನಿಕರು ಇಲ್ಲಸಲ್ಲದ ಸುಳ್ಳು ವದಂತಿಗಳನ್ನು ನಂಬಬಾರದು ಎಂದರು.
ಘಟನೆಯಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ, ನಗರವನ್ನು ಸ್ವಚ್ಛವಾಗಿಸಲು ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಸಂಪೂರ್ಣವಾಗಿ ಬದಲಾವಣೆ ತರಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಈ ಕುರಿತು ಲೋಕಾಯುಕ್ತ ಸಂಪೂರ್ಣವಾಗಿ ಮೇಲ್ವಿಚಾರಣೆ ನಡೆಸಲಿದೆ ಎಂದರು. ಕವಾಡಿಗರಹಟ್ಟಿಯಲ್ಲಿ ಸದ್ಯ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಜನರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಜನರು ತಿಳಿಸುವ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಧಿಕಾರಿಗಳು ತನಿಖೆ ನಡೆಸಿ ವೈಜ್ಞಾನಿಕವಾಗಿ ವರದಿ ನೀಡಲಿದ್ದಾರೆ.
ನಗರದ ಮಲ್ಲಾಪುರ ಹಾಗೂ ಮುರುಘಾಮಠದ ಎದರುರಿನ ಕೆರೆಗಳಿಗೆ ಚರಂಡಿ ನೀರು ಹೋಗಿ ಸೇರುತ್ತಿದೆ. ಇದರಿಂದ ನೀರು ಕಲುಷಿತಗೊಂಡು ಜನ ಜಾನುವಾರು ಕುಡಿಯುಲು ಯೋಗ್ಯವಾಗಿಲ್ಲ. ಇಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ, ಚರಂಡಿ ನೀರನ್ನು ಸ್ವಚ್ಛಗೊಳಿಸಿ ಕೆರಗೆ ಬಿಡುವ ಕೆಲಸವಾಗಬೇಕು. ಜಿಲ್ಲೆಯ ಪರಿಸರ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸುವ ಕುರಿತು ಜಿಲ್ಲಾಧಿಕಾರಿಗಳು ಯೋಜನಾ ವರದಿ ಸಿದ್ದಪಡಿಸಿ ಕ್ರಮಕೈಗೊಳ್ಳಬೇಕು ಎಂದು ಲೋಕಾಯುಕ್ತ ನಾಯಮೂರ್ತಿ ಬಿ.ಎಸ್.ಪಾಟೀಲ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವರಾಮ್, ಡಿವೈಎಸ್‍ಪಿ ಮೃತ್ಯುಂಜಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು