ಬೆಂಗಳೂರು: ಜಿಬಿಎ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ 18,410.46 ಕೋಟಿ ರೂ. ಹಣವನ್ನು ವೆಚ್ಚ ಮಾಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

ಜಿಬಿಎ ಬೆಂಗಳೂರು ನಗರ ವ್ಯಾಪ್ತಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರ ಸಭೆಯಲ್ಲಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಡಿ 8,86,422 ಮಹಿಳೆಯರಿಗೆ ಇದುವರೆಗೂ 4964.40 ಕೋಟಿ ರೂ. ಹಣ ಸಂದಾಯ ಮಾಡಲಾಗಿದೆ. ಪ್ರತಿ ಮಹಿಳೆಯರಿಗೆ ವೈಯಕ್ತಿಕವಾಗಿ ಇದುವರೆಗೆ 30 ಕಂತುಗಳಲ್ಲಿ ತಲಾ ₹60 ಸಾವಿರ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 38,18,902 ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಇದರ 8311.42 ಕೋಟಿ ರೂ. ಹಣವನ್ನು ಬೆಸ್ಕಾಂಗೆ ಸರ್ಕಾರ ಪಾವತಿಸಿದೆ. ಶಕ್ತಿ ಯೋಜನೆಯಡಿ 235.23 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು 3586.36 ಕೋಟಿ ರೂ. ಮೊತ್ತದ ಟಿಕೆಟ್ ಹಣವನ್ನು ಸಾರಿಗೆ ನಿಗಮಕ್ಕೆ ಸರ್ಕಾರ ಭರಿಸಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ 927.13 ಕೋಟಿ ರೂ.ಹಣವನ್ನು ಡಿಬಿಟಿ ಮೂಲಕ ವರ್ಗಾಹಿಸಲಾಗಿದೆ. ಇದಲ್ಲದೇ 30,87,076 ಫಲಾನುಭವಿಗಳಿಗೆ ಆಹಾರಧಾನ್ಯವನ್ನು ಉಚಿತವಾಗಿ ನೀಡಲಾಗಿದ್ದು ಇದಕ್ಕೆ ತಗುಲಿರುವ ಆಹಾರ ಧಾನ್ಯದ ಮೊತ್ತ 568.29 ಕೋಟಿ ರೂ.ಗಳಾಗಿದೆ. ಯುವನಿಧಿ ಯೋಜನೆಯಡಿ 17,664 ನಿರುದ್ಯೋಗ ಯುವಕ ಯುವತಿಯರಿಗೆ 52.86 ಕೋಟಿ ರೂ. ಹಣವನ್ನು ನೀಡಲಾಗಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಕಳೆದ ಮೂರು ವರ್ಷಗಳಿಂದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲಾಗಿದೆ. ಮುಂಬರುವ ಜಿಬಿಎ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಸಾಧನೆಗಳು ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಮನೆಮನೆಗೆ ತಲುಪಿಸುವಲ್ಲಿ ಸಮಿತಿ ಸದಸ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಸದಸ್ಯರು ಜನರ ಅಭಿಪ್ರಾಯ ಸಂಗ್ರಹಿಸಿ ಸ್ಥಳೀಯ ಮಟ್ಟದಲ್ಲಿ ಜನಸಂಪರ್ಕ ಇಟ್ಟುಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಪ್ರಚಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಫಲಾನುಭವಿಗಳ ಅನಿಸಿಕೆ ಮತ್ತು ಅನುಭವದ ವಿಡಿಯೊಗಳನ್ನು ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಬಿಎ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಜಿಬಿಎ ವ್ಯಾಪ್ತಿ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯ ಗ್ಯಾರಂಟಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ನೀಡಲಾದ ಸಲಹೆಗಳು
ಗ್ಯಾರಂಟಿ ಹಣವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಬೇಕು. 28 ವಿಧಾನಸಭಾ ಕ್ಷೇತ್ರಗಳ 369 ವಾರ್ಡ್ ಗಳಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕರಪತ್ರ ವಿತರಣೆ ಹಾಗೂ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರತಿ ವಾರ್ಡ್ ನಲ್ಲಿ ಗ್ಯಾರಂಟಿ ಕ್ಯಾಂಪ್, ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆಮನೆ ಅಭಿಯಾನ ಹಮ್ಮಿಕೊಳ್ಳಬೇಕು. ಮೃತರ ಬಗ್ಗೆ ಸರ್ವೆ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಯಿತು.
ಜನಜಾಗೃತಿ ಮೂಡಿಸಿ: ರೇವಣ್ಣ
ವಾರ್ಡ್, ಬೂತ್ ಮಟ್ಟದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವುದು, ಫಲಾನುಭವಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವಲ್ಲಿ ಜಿಬಿಎ ಮಟ್ಟದ ಗ್ಯಾರಂಟಿ ಸಮಿತಿ ಸದಸ್ಯರು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅದ್ಯಕ್ಷರಾದ ಎಚ್.ಎಂ.ರೇವಣ್ಣ ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಚಿಸಲಾಗಿರುವ ಸಮಿತಿಗಳಿಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಮಾಹಿತಿ–ಶಿಕ್ಷಣ–ಸಂವಹನ (IEC) ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಫಲಾನುಭವಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಜವಾಬ್ದಾರಿ ಸಮಿತಿ ಸದಸ್ಯರ ಮೇಲಿದೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಬರುವ 28 ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಸಮಿತಿ ಅಧ್ಯಕ್ಷರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.



