Friday, July 10, 2026
Google search engine

Homeರಾಜ್ಯಪಾದಚಾರಿ ಮಾರ್ಗ ತೆರವು ಮುಂದುವರಿಕೆ: ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಟೌನ್ ವೆಂಡಿಂಗ್ ಸಮಿತಿ ರಚನೆಗೆ...

ಪಾದಚಾರಿ ಮಾರ್ಗ ತೆರವು ಮುಂದುವರಿಕೆ: ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ, ಟೌನ್ ವೆಂಡಿಂಗ್ ಸಮಿತಿ ರಚನೆಗೆ ಸರ್ಕಾರದ ಭರವಸೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಕಾನೂನುಬದ್ಧ ಗುರುತಿನ ಚೀಟಿ ನೀಡುವ ಉದ್ದೇಶದಿಂದ ತಾತ್ಕಾಲಿಕ ಟೌನ್ ವೆಂಡಿಂಗ್ ಸಮಿತಿಯನ್ನು ತಕ್ಷಣ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದ ಟೌನ್ ವೆಂಡಿಂಗ್ ಸಮಿತಿಯನ್ನೂ ರಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಬೀದಿ ವ್ಯಾಪಾರಿಗಳ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡದ್ದಲ್ಲ ಎಂದು ಸ್ಪಷ್ಟಪಡಿಸಿದರು. ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದ ಸಂಭವಿಸಿದ ಅಪಘಾತಗಳಲ್ಲಿ 931 ಪಾದಚಾರಿಗಳು ಮೃತಪಟ್ಟಿದ್ದು, 3,800 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 3,500ಕ್ಕೂ ಹೆಚ್ಚು ಮಂದಿ ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸಹ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ನಿರ್ದೇಶನ ನೀಡಿರುವುದಾಗಿ ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ ಸಚಿವರು, “ನಾನು ಕೆಟ್ಟವನಾದರೂ ಪರವಾಗಿಲ್ಲ, ಬೆಂಗಳೂರಿಗೆ ಒಳ್ಳೆಯದಾದರೆ ಸಾಕು” ಎಂದು ಹೇಳಿದರು. ಜುಲೈ 1ರಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಇದುವರೆಗೆ 430 ಕಿಲೋಮೀಟರ್‌ಗಿಂತ ಹೆಚ್ಚು ರಸ್ತೆಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲಾಗಿದೆ. 1,581 ಅನಧಿಕೃತ ಅಂಗಡಿಗಳು, 1,800 ರ್ಯಾಂಪ್‌ಗಳು, 1,790 ಶಾಶ್ವತ ನಿರ್ಮಾಣಗಳು, ಅಂಗಡಿಗಳ ಮುಂದೆ ನಿರ್ಮಿಸಿದ್ದ ಶೆಡ್‌ಗಳು ಹಾಗೂ ಸುಮಾರು 2,000 ಫ್ಲೆಕ್ಸ್ ಮತ್ತು ನಾಮಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.

ನಗರದಲ್ಲಿ ಸುಮಾರು 18 ಸಾವಿರ ಕಿಲೋಮೀಟರ್ ರಸ್ತೆ ಜಾಲವಿದ್ದು, ಅದರಲ್ಲಿ 1,500ರಿಂದ 2,000 ಕಿಲೋಮೀಟರ್ ಪ್ರಮುಖ ರಸ್ತೆಗಳಾಗಿವೆ. ಈ ರಸ್ತೆಗಳಲ್ಲಿ ಅತಿಕ್ರಮಣ ಮಾಡದಂತೆ ಬೀದಿ ವ್ಯಾಪಾರಿಗಳಿಗೆ ಮನವಿ ಮಾಡಿದ ಸಚಿವರು, ಉಳಿದ ಒಳರಸ್ತೆಗಳಲ್ಲಿ ವ್ಯಾಪಾರ ನಡೆಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದರು.

ಇದೇ ವೇಳೆ ಸಚಿವರನ್ನು ಭೇಟಿಯಾದ ಜಂಟಿ ಬೀದಿ ವ್ಯಾಪಾರಿಗಳ ಒಕ್ಕೂಟ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಪಾದಚಾರಿ ಮಾರ್ಗಗಳ ಮೇಲಿನ ವ್ಯಾಪಾರವೇ ಅಪಘಾತಗಳಿಗೆ ಪ್ರಮುಖ ಕಾರಣ ಎಂಬ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಒಕ್ಕೂಟ, ಹೆಚ್ಚಿನ ಅಪಘಾತಗಳಿಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದೇ ಮುಖ್ಯ ಕಾರಣ ಎಂದು ವಾದಿಸಿದೆ.

RELATED ARTICLES
- Advertisment -
Google search engine

Most Popular