Sunday, July 12, 2026
Google search engine

Homeರಾಜ್ಯಸಾರಿಗೆ ಸಚಿವ ಬೈರತಿ ಸುರೇಶ್ ದಿಢೀರ್ ಸಿಟಿ ರೌಂಡ್ಸ್ : BMTC ನೌಕರರಿಗೆ ಬಿಗ್ ಶಾಕ್!

ಸಾರಿಗೆ ಸಚಿವ ಬೈರತಿ ಸುರೇಶ್ ದಿಢೀರ್ ಸಿಟಿ ರೌಂಡ್ಸ್ : BMTC ನೌಕರರಿಗೆ ಬಿಗ್ ಶಾಕ್!

ಬೆಂಗಳೂರು : ಸಾರ್ವಜನಿಕ ಸಾರಿಗೆ ಸೇವೆಯ ಗುಣಮಟ್ಟ ಪರಿಶೀಲಿಸುವ ಉದ್ದೇಶದಿಂದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಸಂಚರಿಸಿ ಪರಿಶೀಲನೆ ನಡೆಸಿದರು.

ಸಂಜೆ 7.10ರಿಂದ ರಾತ್ರಿ 9.10ರವರೆಗೆ ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಸಿದ ಸಚಿವರು, ಜಯಮಹಲ್, ಆರ್‌.ಟಿ.ನಗರ, ಹೆಬ್ಬಾಳ, ನಾಗವಾರ, ಹೆಣ್ಣೂರು ಹಾಗೂ ಗೆದ್ದಲಹಳ್ಳಿ ಭಾಗಗಳಲ್ಲಿ 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಖರೀದಿಸಿ ಪ್ರಯಾಣಿಸಿದರು.

ಈ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತನಾಡಿ, ಬಸ್ ಸೇವೆಯ ಗುಣಮಟ್ಟ, ಸಿಬ್ಬಂದಿಯ ವರ್ತನೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಬಸ್ ನಿಲ್ಲಿಸದ ಚಾಲಕ-ನಿರ್ವಾಹಕರಿಗೆ ಅಮಾನತು ಆದೇಶ : ಪರಿಶೀಲನೆ ವೇಳೆ ಫನ್ ವರ್ಲ್ಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕೈ ತೋರಿಸಿದರೂ ಬಸ್ ನಿಲ್ಲಿಸದೆ ಮುಂದುವರಿದ ಘಟನೆ ಸಚಿವರ ಗಮನಕ್ಕೆ ಬಂದಿದ್ದು, ಕೂಡಲೇ ಕೆಎ 57 ಎಫ್ 3372 ಸಂಖ್ಯೆಯ ಬಿಎಂಟಿಸಿ ಬಸ್‌ನ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಚಿವರಿಗೂ ಎದುರಾದ ಚಿಲ್ಲರೆ ಸಮಸ್ಯೆ : ಹೆಬ್ಬಾಳ–ನಾಗಶೆಟ್ಟಿಹಳ್ಳಿ ಮಾರ್ಗದ ಬಸ್‌ನಲ್ಲಿ ಸಚಿವರು ₹100 ನೀಡಿ ಟಿಕೆಟ್ ಕೇಳಿದಾಗ, ಚಿಲ್ಲರೆ ಇಲ್ಲವೆಂದು ನಿರ್ವಾಹಕರು ಬಸ್‌ನಿಂದ ಇಳಿಯುವಂತೆ ಹೇಳಿದ ಘಟನೆ ನಡೆಯಿತು. ಸಾಮಾನ್ಯ ಪ್ರಯಾಣಿಕರು ಎದುರಿಸುವ ಈ ಸಮಸ್ಯೆಯನ್ನು ಸ್ವತಃ ಅನುಭವಿಸಿದ ಸಚಿವರು, ಈ ಕುರಿತು ಅಧಿಕಾರಿಗಳ ಗಮನ ಸೆಳೆದರು.

ಆಟೋ ಚಾಲಕನಿಗೆ ಎಚ್ಚರಿಕೆ : ಬಳಿಕ ನಾಗಶೆಟ್ಟಿಹಳ್ಳಿಯಲ್ಲಿ ಆಟೋ ಸೇವೆಗಳನ್ನೂ ಪರಿಶೀಲಿಸಿದ ಸಚಿವರು, ಮೀಟರ್‌ನಲ್ಲಿ ₹30 ತೋರಿಸುತ್ತಿದ್ದರೂ ₹36 ದರ ಕೇಳುತ್ತಿದ್ದ ಆಟೋ ಚಾಲಕನನ್ನು ತರಾಟೆಗೆ ತೆಗೆದುಕೊಂಡು, ಮೀಟರ್ ಪ್ರಕಾರವೇ ದರ ವಸೂಲಿ ಮಾಡುವಂತೆ ಸೂಚಿಸಿದರು.

ಸಚಿವರ ಪ್ರತಿಕ್ರಿಯೆ : ಸಾರ್ವಜನಿಕ ಸಾರಿಗೆ ಸೇವೆಯನ್ನು ಇನ್ನಷ್ಟು ವಿಶ್ವಾಸಾರ್ಹ ಹಾಗೂ ಪ್ರಯಾಣಿಕ ಸ್ನೇಹಿಯಾಗಿಸಲು ಇಂತಹ ದಿಢೀರ್ ಪರಿಶೀಲನೆಗಳನ್ನು ಮುಂದುವರಿಸಲಾಗುವುದು. ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಜವಾಬ್ದಾರಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular