Sunday, July 12, 2026
Google search engine

Homeರಾಜ್ಯಪೋಕ್ಸೋ ಪ್ರಕರಣ ಮುಚ್ಚಿಟ್ಟರೆ ಶಾಲೆಗಳಿಗೂ ಶಿಕ್ಷೆ : ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್ ಎಚ್ಚರಿಕೆ

ಪೋಕ್ಸೋ ಪ್ರಕರಣ ಮುಚ್ಚಿಟ್ಟರೆ ಶಾಲೆಗಳಿಗೂ ಶಿಕ್ಷೆ : ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡದೇ ಮುಚ್ಚಿಡುವ ಶಿಕ್ಷಣ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬಹುದು ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಉಡುಪಿ ಜಿಲ್ಲೆಯ ವಸತಿ ಶಾಲೆಯೊಂದರ ಮುಖ್ಯೋಪಾಧ್ಯಾಯ, ಸಹ ಮುಖ್ಯೋಪಾಧ್ಯಾಯ ಹಾಗೂ ವಾರ್ಡನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿದ್ದು, ಈ ಸಂದರ್ಭದಲ್ಲಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಬಗ್ಗೆ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯ ಸೆಕ್ಷನ್ 4, 8 ಮತ್ತು 21ರಡಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಪ್ರಕರಣ ರದ್ದುಪಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಈ ಹಂತದಲ್ಲಿ ದೂರಿನಲ್ಲಿರುವ ಆರೋಪಗಳನ್ನು ಸತ್ಯವೆಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದ ವಿವರಗಳ ಪ್ರಕಾರ, ವಸತಿ ಶಾಲೆಯಲ್ಲಿ ಬಾಲಕನ ಸಹಪಾಠಿಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಶಾಲಾ ಆಡಳಿತಕ್ಕೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬ ದೂರು ಇದೆ. ಬದಲಾಗಿ ಘಟನೆಯನ್ನು ಬೇರೆ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಬಾಲಕ ನೀಡಿದ್ದ ದೂರಿನ ಮಾಹಿತಿಯನ್ನು ಬದಲಾಯಿಸಲು ಯತ್ನಿಸಲಾಗಿದ್ದು, ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಪರಿಗಣಿಸಿದೆ. ಪೋಕ್ಸೋ ಕಾಯ್ದೆಯ ಉದ್ದೇಶ ಕೇವಲ ಅಪರಾಧಿಗೆ ಶಿಕ್ಷೆ ನೀಡುವುದಷ್ಟೇ ಅಲ್ಲ, ಪ್ರಕರಣಗಳನ್ನು ಮುಚ್ಚಿಡುವ ಪ್ರವೃತ್ತಿಯನ್ನು ತಡೆಯುವುದೂ ಆಗಿದೆ ಎಂದು ಹೈಕೋರ್ಟ್ ಹೇಳಿದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡದೆ ಮರೆಮಾಚುವುದು ಅಪರಾಧಿಗೆ ಧೈರ್ಯ ತುಂಬುವುದರ ಜೊತೆಗೆ ಸಂತ್ರಸ್ತ ಮಗುವಿನ ನೋವನ್ನು ಹೆಚ್ಚಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಕ್ಕಳನ್ನು ಶಿಕ್ಷಣ ಸಂಸ್ಥೆಗಳ ಆರೈಕೆಗೆ ಒಪ್ಪಿಸುವ ಪೋಷಕರ ವಿಶ್ವಾಸವನ್ನು ಕಾಪಾಡುವುದು ಶಾಲೆಗಳ ಜವಾಬ್ದಾರಿಯಾಗಿದ್ದು, ಯಾವುದೇ ಸಂಸ್ಥೆ ಪ್ರಕರಣ ಮುಚ್ಚಿಡಲು ಮುಂದಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

RELATED ARTICLES
- Advertisment -
Google search engine

Most Popular