Tuesday, July 14, 2026
Google search engine

HomeUncategorizedಬಿಡದಿ ರೈತರ ಮೇಲಿನ FIR ರದ್ದು ಮಾಡಿ, ಇಲ್ಲದಿದ್ದರೆ ಹೋರಾಟ : ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಬಿಡದಿ ರೈತರ ಮೇಲಿನ FIR ರದ್ದು ಮಾಡಿ, ಇಲ್ಲದಿದ್ದರೆ ಹೋರಾಟ : ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ

ಬೆಂಗಳೂರು : ಬಿಡದಿ ಟೌನ್‌ಶಿಪ್ ಹೋರಾಟಗಾರರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ಕೂಡಲೇ ರದ್ದು ಮಾಡಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆ ಹೆಸರಿನಲ್ಲಿ ಅಮಾಯಕ ರೈತರ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ರೈತರ ಮೇಲಿನ ಪ್ರಕರಣಗಳನ್ನು ದಾಖಲಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು ಯಾವುದೇ ಮಾಹಿತಿ ನೀಡದೆ ರೈತರ ಜಮೀನಿಗೆ ನುಗ್ಗಿ ಜಂಟಿ ಮಾಪನ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ ರೈತರ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಎಫ್‌ಐಆರ್ ಅಸ್ತ್ರ ಬಳಸುತ್ತಿದೆ ಎಂದು ನಿಖಿಲ್ ಆರೋಪಿಸಿದ್ದಾರೆ.

ರೈತರು ತಮ್ಮ ನ್ಯಾಯಯುತ ಹೋರಾಟಕ್ಕೆ ಹೆದರಬೇಕಿಲ್ಲ. ಅಗತ್ಯವಿರುವ ಸಂಪೂರ್ಣ ಕಾನೂನು ನೆರವು ಹಾಗೂ ಬೆಂಬಲವನ್ನು ನೀಡಲು ಜೆಡಿಎಸ್ ಸದಾ ಸಿದ್ಧವಿದೆ. ಇನ್ನು 48 ಗಂಟೆಗಳ ಒಳಗೆ ರೈತರ ಮೇಲಿನ ಎಫ್‌ಐಆರ್‌ಗಳನ್ನು ರದ್ದುಪಡಿಸಿ, ವಶಕ್ಕೆ ಪಡೆದಿರುವವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರವಾಸದ ಕುರಿತು ವ್ಯಂಗ್ಯವಾಡಿದ ಅವರು, ಅಂಡಮಾನ್-ನಿಕೋಬಾರ್‌ಗೆ ಭೇಟಿ ನೀಡುವ ಬದಲು ಬಿಡದಿಗೆ ಬಂದು ರೈತರ ಪರಿಸ್ಥಿತಿ ನೋಡಲಿ ಎಂದು ಹೇಳಿದ್ದಾರೆ.

ಬಿಡದಿ ಭಾಗದ ರೈತರು ತೆಂಗು, ಭತ್ತ, ರೇಷ್ಮೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು. 136 ಸ್ಥಾನಗಳನ್ನು ನೀಡಿ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ರಾಹುಲ್ ಗಾಂಧಿ ಬಿಡದಿಗೆ ಭೇಟಿ ನೀಡಿದರೆ ಇನ್ನಷ್ಟು ಸ್ಥಾನ ಗೆಲ್ಲಲು ಸಹಾಯವಾಗಬಹುದು ಎಂದು ನಿಖಿಲ್ ಟೀಕಿಸಿದ್ದಾರೆ.

RELATED ARTICLES
- Advertisment -
Google search engine

Most Popular