ಬೆಂಗಳೂರು : ರಾಜ್ಯದ ಯುವ ಸಮುದಾಯದಲ್ಲಿ ಕ್ರೀಡಾ ಚಟುವಟಿಕೆ, ಸಾಂಸ್ಕೃತಿಕ ಪ್ರಜ್ಞೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಪ್ರದೇಶಗಳ ವಾರ್ಡ್ಗಳಲ್ಲಿ ಒಟ್ಟು 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಇತ್ತೀಚಿನ ಸಚಿವ ಸಂಪುಟ ತೀರ್ಮಾನದ ಬಳಿಕ ಯೋಜನೆಯ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಜಾರಿಯಾಗಲಿರುವ ಈ ಯೋಜನೆಗೆ ಒಟ್ಟು 1,010 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಪ್ರತಿ ಯುವ ಸಂಘಕ್ಕೆ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ.
ಇದಲ್ಲದೆ, ಪ್ರತಿ ಸಂಘದ ತರಬೇತುದಾರರಿಗೆ ವಾರ್ಷಿಕ 24 ಸಾವಿರ ರೂಪಾಯಿ ಗೌರವಧನ ನೀಡಲಾಗುತ್ತದೆ. ಯೋಜನೆಯ ನಿರ್ವಹಣೆಗೆ ಪ್ರತಿ ವರ್ಷ 10 ಕೋಟಿ ರೂಪಾಯಿ ಆಡಳಿತಾತ್ಮಕ ವೆಚ್ಚವನ್ನು ಕ್ರೀಡಾ ಇಲಾಖೆ ಭರಿಸಲಿದ್ದು, ಈ ಯೋಜನೆಯಡಿ ರಾಜ್ಯದಲ್ಲಿ 6 ಸಾವಿರ ಗ್ರಾಮೀಣ ಪ್ರದೇಶಗಳ ಯುವ ಸಂಘಗಳು ಹಾಗೂ 4 ಸಾವಿರ ನಗರ ಪ್ರದೇಶಗಳ ಯುವ ಸಂಘಗಳು ರಚನೆಯಾಗಲಿವೆ.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಒಂದು ಸಂಘ ಇರಲಿದ್ದು, ಜನಸಂಖ್ಯೆ ಆಧಾರದ ಮೇಲೆ ಪಟ್ಟಣ, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಸಂಘಗಳನ್ನು ಸ್ಥಾಪಿಸಲಾಗುತ್ತದೆ. ಯುವ ಸಂಘಗಳ ಸದಸ್ಯತ್ವಕ್ಕೆ 16 ರಿಂದ 35 ವರ್ಷದೊಳಗಿನ ಯುವಕ-ಯುವತಿಯರಿಗೆ ಅವಕಾಶ ನೀಡಲಾಗಿದ್ದು, ಪ್ರತಿ ಸಂಘದಲ್ಲಿ ಕನಿಷ್ಠ 100 ಮಂದಿ ಸದಸ್ಯರಿರಬೇಕು. ಸದಸ್ಯರು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ನ ಸ್ಥಳೀಯ ನಿವಾಸಿಗಳಾಗಿರಬೇಕು. ಒಬ್ಬ ವ್ಯಕ್ತಿಗೆ ಒಂದೇ ಒಂದು ಸಂಘದಲ್ಲಿ ಸದಸ್ಯತ್ವ ಪಡೆಯಲು ಅವಕಾಶ ಇರಲಿದೆ.
ಯುವಕರನ್ನು ಕ್ರೀಡೆ, ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳತ್ತ ಸೆಳೆಯುವ ಮೂಲಕ ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.



