Tuesday, July 14, 2026
Google search engine

Homeರಾಜ್ಯಆದಿಚುಂಚನಗಿರಿ ಮಠದ ₹120 ಕೋಟಿ ಜಮೀನು ವಂಚನೆ ಪ್ರಕರಣ ಬಯಲು ; 6 ಸರ್ಕಾರಿ ಅಧಿಕಾರಿಗಳು...

ಆದಿಚುಂಚನಗಿರಿ ಮಠದ ₹120 ಕೋಟಿ ಜಮೀನು ವಂಚನೆ ಪ್ರಕರಣ ಬಯಲು ; 6 ಸರ್ಕಾರಿ ಅಧಿಕಾರಿಗಳು ಸೇರಿ 11 ಮಂದಿ ಅರೆಸ್ಟ್‌

ಬೆಂಗಳೂರು : ಆದಿಚುಂಚನಗಿರಿ ಮಠಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಲು ಯತ್ನಿಸಿದ್ದ ಬೃಹತ್ ವಂಚನೆ ಜಾಲವನ್ನು ಕೆಂಗೇರಿ ಪೊಲೀಸರು ಭೇದಿಸಿದ್ದಾರೆ.

ಪ್ರಕರಣ ಸಂಬಂಧ ಆರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ವ್ಯವಸ್ಥಿತವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬಳಿಕೆಗೆ ಯತ್ನಿಸಿರುವುದು ಪತ್ತೆಯಾಗಿದೆ.

ಬಂಧಿತರಲ್ಲಿ ಬೇಗೂರು ಗ್ರಾಮ ಲೆಕ್ಕಿಗ ಶಿವಪ್ರಸಾದ್, ಕಂದಾಯ ನಿರೀಕ್ಷಕ ಕಿರಣ್, ಡೆಪ್ಯುಟಿ ತಹಸೀಲ್ದಾರ್ ದೀಪಕ್, ಕೆಂಗೇರಿ ಗ್ರಾಮ ಲೆಕ್ಕಿಗ ಸತೀಶ್ ಕುಮಾರ್ ಹಾಗೂ ಕಂದಾಯ ನಿರೀಕ್ಷಕ ಅರುಣ್ ಕುಮಾರ್ ಸೇರಿದಂತೆ ಅಧಿಕಾರಿಗಳು ಇದ್ದಾರೆ. ಇತರ ಆರೋಪಿಗಳಾದ ಆರೋಗ್ಯ ಸ್ವಾಮಿ, ಫ್ರಾನ್ಸಿಸ್ ಜೋಸ್ವಾನ್, ಶ್ರೀನಿವಾಸ ನರೇಂದ್ರ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಕಂಬಳಿಪುರ ಗ್ರಾಮದ ಸರ್ವೆ ನಂಬರ್ 43ರಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಈ ಅಕ್ರಮ ನಡೆದಿದ್ದು, ಸುಮಾರು 30 ವರ್ಷಗಳ ಹಿಂದೆ ಭಕ್ತರು ಆದಿಚುಂಚನಗಿರಿ ಮಠಕ್ಕೆ ಕಾಣಿಕೆ ರೂಪದಲ್ಲಿ ನೀಡಿದ್ದ 45 ಎಕರೆ ಜಮೀನಿನ ಪೈಕಿ 6 ಎಕರೆ ಜಾಗವನ್ನು ಕಬಳಿಸಲು ಸಂಚು ರೂಪಿಸಲಾಗಿತ್ತು. ಮಠದ ಹೆಸರಿನಲ್ಲಿದ್ದ ಈ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಕ್ಕು ಬದಲಾವಣೆ ಮಾಡಲು ಯತ್ನಿಸಲಾಗಿದ್ದು, ಕಬಳಿಸಲು ಮುಂದಾಗಿದ್ದ ಆರು ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು ₹120 ಕೋಟಿ ಎಂದು ಅಂದಾಜಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ನೆಲಮಂಗಲ ಮೂಲದ ನರೇಶ್ ಗೌಡ ಸದ್ಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಕೆಂಗೇರಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸರ್ಕಾರಿ ಹಾಗೂ ಧಾರ್ಮಿಕ ಸಂಸ್ಥೆಗಳ ಆಸ್ತಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ.

RELATED ARTICLES
- Advertisment -
Google search engine

Most Popular