ಕಲಬುರಗಿ : ಕೇಂದ್ರ ಕಾರಾಗೃಹದಿಂದ ಮಧ್ಯರಾತ್ರಿ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ಸಮೀಪ ನಡೆದ ಕಾರ್ಯಾಚರಣೆಯಲ್ಲಿ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಜೈಲಿನಿಂದ ತಪ್ಪಿಸಿಕೊಂಡ ಬಳಿಕ ಸಂತೋಷ್ ಕಲಬುರಗಿಯಿಂದ ಬೀದರ್ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಎನ್ನಲಾಗಿದ್ದು, ಖಚಿತ ಮಾಹಿತಿ ಪಡೆದ ಹುಮನಾಬಾದ್ ಪೊಲೀಸರು ಆರ್ಟಿಓ ಸರ್ಕಲ್ ಬಳಿ ಬಸ್ನ್ನು ತಡೆದು ತಪಾಸಣೆ ನಡೆಸಿದ ವೇಳೆ ಆರೋಪಿ ಪತ್ತೆಯಾಗಿದ್ದಾನೆ.
ಪೊಲೀಸರನ್ನು ಕಂಡ ತಕ್ಷಣ ಸಂತೋಷ್ ಪರಾರಿಯಾಗಲು ಯತ್ನಿಸಿದ್ದಲ್ಲದೆ, ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಲಬುರಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಮಂಗಳವಾರ ಮಧ್ಯರಾತ್ರಿ ಸುಮಾರು 3 ಗಂಟೆ ವೇಳೆಗೆ ಮಸ್ತಾನ್, ಸಂತೋಷ್ ಹಾಗೂ ಸಾಗರ್ ಎಂಬ ಮೂವರು ಕೈದಿಗಳು ಕೇಂದ್ರ ಕಾರಾಗೃಹದ ಗೋಡೆ ಹಾರಿ ಪರಾರಿಯಾಗಿದ್ದರು. ಬೀದರ್ ಜಿಲ್ಲೆಯ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಈ ಮೂವರ ಪೈಕಿ ಈಗ ಸಂತೋಷ್ ಬಂಧನಕ್ಕೊಳಗಾಗಿದ್ದು, ಉಳಿದಿರುವ ಮಸ್ತಾನ್ ಹಾಗೂ ಸಾಗರ್ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇದೇ ವೇಳೆ, ಬಿಗಿ ಭದ್ರತೆಯ ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾಗಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೈದಿಗಳ ಪರಾರಿಯಲ್ಲಿ ಜೈಲು ಸಿಬ್ಬಂದಿಯ ಪಾತ್ರವಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಮಧ್ಯರಾತ್ರಿ ಲಾಕಪ್ನಲ್ಲಿರಬೇಕಿದ್ದ ಕೈದಿಗಳು ಹೊರಬಂದದ್ದು ಹೇಗೆ ಎಂಬ ಪ್ರಶ್ನೆ ಕೂಡ ಎದ್ದಿದೆ. ಪ್ರಕರಣ ಸಂಬಂಧ ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



