ದೆಹಲಿ : ನಾಗರಿಕರ ಜೀವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿ, ಅಕ್ರಮ ಬಂಧನ, ಮನೆಗಳ ಧ್ವಂಸ, ಗಡಿಪಾರು ಮತ್ತು ಕಸ್ಟಡಿಯಲ್ ಹಿಂಸಾಚಾರದಂತಹ ತುರ್ತು ಪ್ರಕರಣಗಳಲ್ಲಿ 24 ಗಂಟೆಯೂ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಕಲ್ಪಿಸುವ ವಿಶೇಷ ಕಾರ್ಯವಿಧಾನ (SOP) ರೂಪಿಸಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ, ಹೊಸ ಎಸ್ಒಪಿ ರೂಪಿಸುವ ಪ್ರಸ್ತಾವವನ್ನು ಪರಿಗಣಿಸಲು ಸಮ್ಮತಿಸಿದೆ. ಸುಪ್ರೀಂ ಕೋರ್ಟ್ ವಕೀಲೆ ಮಹೇರವಿಶ್ ರೈನ್ ಈ ಅರ್ಜಿಯನ್ನು ಸಲ್ಲಿಸಿದ್ದರು.
ಈ ಅರ್ಜಿಯಲ್ಲಿ, ವಾರಾಂತ್ಯದ ರಜಾದಿನಗಳು ಅಥವಾ ಮಧ್ಯರಾತ್ರಿ, ಮುಂಜಾನೆ ವೇಳೆಯಲ್ಲಿ ನಡೆಯುವ ಅಕ್ರಮ ಬಂಧನ, ಬುಲ್ಡೋಜರ್ ಮೂಲಕ ಮನೆಗಳ ಧ್ವಂಸ ಹಾಗೂ ಗಡಿಪಾರು ಕ್ರಮಗಳ ವಿರುದ್ಧ ಸಂತ್ರಸ್ತರಿಗೆ ತಕ್ಷಣ ಕಾನೂನು ನೆರವು ದೊರೆಯದ ಪರಿಸ್ಥಿತಿಯನ್ನು ಉಲ್ಲೇಖಿಸಲಾಗಿದ್ದು, ಕೋರ್ಟ್ಗಳಿಗೆ ರಜೆ ಇರುವ ಸಮಯದಲ್ಲೇ ಇಂತಹ ಕ್ರಮಗಳು ನಡೆಯುತ್ತವೆ ಎಂಬ ಆರೋಪವನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಪ್ರಸ್ತಾವಿತ 24×7 ತುರ್ತು ನ್ಯಾಯ ವ್ಯವಸ್ಥೆ ಜಾರಿಯಾದರೆ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಂತ್ರಸ್ತರು ಹಗಲು-ರಾತ್ರಿ ಎನ್ನದೆ ಸುಪ್ರೀಂ ಕೋರ್ಟ್ ಅಥವಾ ಸಂಬಂಧಿತ ನ್ಯಾಯಾಲಯದ ಮೊರೆ ಹೋಗಿ ತಕ್ಷಣದ ಪರಿಹಾರ ಹಾಗೂ ತಡೆಯಾಜ್ಞೆ ಪಡೆಯಲು ಸಾಧ್ಯವಾಗಲಿದ್ದು, ಈ ಕ್ರಮವು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಮತ್ತಷ್ಟು ಬಲ ನೀಡುವ ಮಹತ್ವದ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



