ತಿರುಮಲ : ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ‘ಪ್ರಥಮ ಆರತಿ’ ಗೌರವವನ್ನು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡುವ ಕುರಿತು ಕೇಳಿಬಂದಿರುವ ಪ್ರಸ್ತಾಪಕ್ಕೆ ಟಿಟಿಡಿ ಆಡಳಿತ ಮಂಡಳಿಯಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಟಿಟಿಡಿ ಆಡಳಿತ ಮಂಡಳಿ ಸದಸ್ಯ ಎಸ್.ನರೇಶ್ ಕುಮಾರ್ ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದ ನಡೆದುಕೊಂಡು ಬಂದಿರುವ ಈ ಐತಿಹಾಸಿಕ ಸಂಪ್ರದಾಯಕ್ಕೆ ಗೌರವ ನೀಡುವ ರೀತಿಯಲ್ಲಿ ಹೊಸ ಶಿಷ್ಟಾಚಾರ ರೂಪಿಸುವುದು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಮುಜರಾಯಿ ಇಲಾಖೆಯ ಅಧಿಕಾರಿಗಳು ಈ ಗೌರವ ಸ್ವೀಕರಿಸುತ್ತಿದ್ದು, ಹೊಸ ವ್ಯವಸ್ಥೆಯಲ್ಲಿ ಕೇವಲ ರಾಜಕೀಯ ಪ್ರತಿನಿಧಿಗಳಿಗೆ ಮಾತ್ರವಲ್ಲದೆ, ಆ ದಿನ ತಿರುಮಲದಲ್ಲಿ ಉಪಸ್ಥಿತರಿರುವ ಕರ್ನಾಟಕದ ಪ್ರಮುಖ ಗಣ್ಯರಿಗೂ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಬೇಕೆಂದು ಅವರು ಸಲಹೆ ನೀಡಿದರು.
ಅಲ್ಲದೆ, ಇಂತಹ ಶಿಷ್ಟಾಚಾರವನ್ನು ಟಿಟಿಡಿ ದೇವಾಲಯಗಳಿಗೆ ಮಾತ್ರ ಸೀಮಿತಗೊಳಿಸದೆ, ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೂ ಐತಿಹಾಸಿಕ ಸಂಪ್ರದಾಯಗಳಿಗೆ ಅನುಗುಣವಾಗಿ ರೂಪಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಟಿಟಿಡಿ ಸದಸ್ಯ ಜಿ.ಭಾನುಪ್ರಕಾಶ್ ರೆಡ್ಡಿ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮೈಸೂರು ಮಹಾರಾಜರು ತಿರುಮಲ ದೇವಾಲಯಕ್ಕೆ ನೀಡಿರುವ ಅಪಾರ ದಾನ ಮತ್ತು ಕೊಡುಗೆಗಳಿಗೆ ಗೌರವ ಸೂಚಿಸುವ ಸಲುವಾಗಿ ಅವರಿಗೆ ‘ಪ್ರಥಮ ಆರತಿ’ ಹಕ್ಕು ನೀಡಲಾಗಿತ್ತು. ಬಳಿಕ ಆ ಗೌರವವನ್ನು ಅವರ ಪ್ರತಿನಿಧಿಗಳಿಗೆ ವರ್ಗಾಯಿಸಲಾಗಿದ್ದು, ಕರ್ನಾಟಕ ಸರ್ಕಾರ ಶಿಫಾರಸು ಮಾಡಿದರೂ ಈ ಹಕ್ಕನ್ನು ಬೇರೆ ಯಾರಿಗೂ ವಿಸ್ತರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಜುಲೈದಿಂದ ಸೆಪ್ಟೆಂಬರ್ 30ರವರೆಗೆ ನಡೆಯಲಿರುವ ಪ್ರಮುಖ ಹಬ್ಬಗಳು ಹಾಗೂ ಸೆ.15ರಿಂದ 23ರವರೆಗೆ ನಡೆಯುವ ವಾರ್ಷಿಕ ಶ್ರೀವಾರಿ ಸಾಲಕಟ್ಲ ಬ್ರಹ್ಮೋತ್ಸವದ ಹಿನ್ನೆಲೆ ಸಾಮಾನ್ಯ ಭಕ್ತರ ಅನುಕೂಲಕ್ಕಾಗಿ ವಿಐಪಿ ಬ್ರೇಕ್ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಅವಧಿಯಲ್ಲಿ ಯಾವುದೇ ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಆದರೆ, ಪ್ರೋಟೋಕಾಲ್ ವ್ಯಾಪ್ತಿಗೆ ಬರುವ ಉನ್ನತ ಗಣ್ಯರಿಗೆ ಮಾತ್ರ ವಿನಾಯಿತಿ ಇರಲಿದೆ.
ಹಿರಿಯ ನಾಗರಿಕರು, ದಿವ್ಯಾಂಗರು ಹಾಗೂ ಸಣ್ಣ ಮಕ್ಕಳಿರುವ ಪೋಷಕರಿಗೆ ನೀಡಲಾಗುತ್ತಿದ್ದ ವಿಶೇಷ ದರ್ಶನ ಸೌಲಭ್ಯವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಕ್ತರು ದರ್ಶನಕ್ಕೆ ತೆರಳುವ ಮುನ್ನ ಅಧಿಕೃತ ಆಪ್ ಅಥವಾ ವೆಬ್ಸೈಟ್ನಲ್ಲಿ ವೇಳಾಪಟ್ಟಿ ಪರಿಶೀಲಿಸಿ ಪ್ರಯಾಣ ಯೋಜಿಸಬೇಕು ಎಂದು ಟಿಟಿಡಿ ಮನವಿ ಮಾಡಿದೆ.



