ಬೆಂಗಳೂರು : ಸರ್ಕಾರಿ ಹಣದ ದುರ್ಬಳಕೆ ಮತ್ತು ಆರ್ಥಿಕ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಬ್ಯಾಂಕ್ ಖಾತೆಗಳ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ.
ಆರ್ಥಿಕ ಇಲಾಖೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಸರ್ಕಾರದ ಎಲ್ಲಾ ಬ್ಯಾಂಕ್ ಖಾತೆಗಳ ದಾಖಲೆಗಳಲ್ಲಿ ಕಡ್ಡಾಯವಾಗಿ ಅಧಿಕೃತ ಸರ್ಕಾರಿ ಡೊಮೇನ್ ಹೊಂದಿರುವ ಇಮೇಲ್ ಐಡಿಗಳನ್ನು ಮಾತ್ರ ನಮೂದಿಸಬೇಕು. ವೈಯಕ್ತಿಕ ಜಿಮೇಲ್ ಅಥವಾ ಇತರೆ ಖಾಸಗಿ ಇಮೇಲ್ ವಿಳಾಸಗಳನ್ನು ಬ್ಯಾಂಕ್ ಖಾತೆಗಳ ಸಂಪರ್ಕ ಮಾಹಿತಿಗೆ ಬಳಸುವುದನ್ನು ನಿಷೇಧಿಸಲಾಗಿದೆ.
ಬ್ಯಾಂಕ್ ಖಾತೆಗಳಲ್ಲಿನ ಸಂಪರ್ಕ ಮಾಹಿತಿಯ ದುರ್ಬಳಕೆ ಮಾಡಿಕೊಂಡು ಹಣ ವರ್ಗಾವಣೆ ಹಾಗೂ ಆರ್ಥಿಕ ಅಕ್ರಮ ನಡೆಸಿರುವ ಕೆಲವು ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಕೆಲವು ಸರ್ಕಾರಿ ಖಾತೆಗಳಿಗೆ ಅನಧಿಕೃತ ಇ-ಮೇಲ್ ಐಡಿಗಳನ್ನು ಜೋಡಿಸಿ ವಂಚನೆ ನಡೆಸಿರುವ ಪ್ರಕರಣಗಳು ತನಿಖೆಯಲ್ಲಿ ಬೆಳಕಿಗೆ ಬಂದಿದ್ದವು.
ಹೊಸ ವ್ಯವಸ್ಥೆಯಡಿ ಎಲ್ಲಾ ಇಲಾಖೆಗಳು, ಸರ್ಕಾರಿ ಕಚೇರಿಗಳು, ಹಣ ಬಿಡುಗಡೆ ಮತ್ತು ಪಾವತಿ ನಿರ್ವಹಿಸುವ ಅಧಿಕಾರಿಗಳು (DDO), ಖಜಾನೆ ಅಧಿಕಾರಿಗಳು ಹಾಗೂ ಸಿಂಗಲ್ ನೋಡಲ್ ಏಜೆನ್ಸಿ (SNA) ನಿರ್ವಾಹಕರಿಗೆ ಜವಾಬ್ದಾರಿ ನಿಗದಿಪಡಿಸಲಾಗಿದೆ. ಅಧಿಕೃತ ಸಹಿದಾರರು ಮತ್ತು ಪವರ್ ಆಫ್ ಅಟಾರ್ನಿ ಹೊಂದಿರುವವರೂ ತಮ್ಮ ಬ್ಯಾಂಕ್ ಸಂಪರ್ಕ ವಿವರಗಳನ್ನು ತಕ್ಷಣ ಪರಿಷ್ಕರಿಸುವಂತೆ ಸೂಚಿಸಲಾಗಿದೆ.
ಸರ್ಕಾರಿ ಬ್ಯಾಂಕ್ ಖಾತೆಗಳ ಆನ್‌ಲೈನ್ ವಹಿವಾಟುಗಳ ಮಾಹಿತಿ ಮತ್ತು ನವೀಕರಣಗಳು ಕೇವಲ ಅಧಿಕೃತ ಸರ್ಕಾರಿ ಇ-ಮೇಲ್‌ಗಳಿಗೆ ಮಾತ್ರ ತಲುಪುವಂತೆ ಮಾಡುವ ಮೂಲಕ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ.



