ಅಯೋಧ್ಯೆ, ಉತ್ತರ ಪ್ರದೇಶ : ರಾಮಮಂದಿರದ ದೇಣಿಗೆ ದುರುಪಯೋಗ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ದೇಶದಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗಿದೆ.
ಟ್ರಸ್ಟ್ ಸೋಮವಾರ ಅರ್ಜಿ ಆಹ್ವಾನಿಸಿದ್ದು, ಕೇವಲ 24 ಗಂಟೆಗಳಲ್ಲೇ 1,000ಕ್ಕೂ ಹೆಚ್ಚು ಅರ್ಜಿಗಳು ಇ-ಮೇಲ್ ಮೂಲಕ ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸಿದವರಲ್ಲಿ ಹೆಚ್ಚಿನವರು ನಿವೃತ್ತ ಸರ್ಕಾರಿ ಅಧಿಕಾರಿಗಳಾಗಿದ್ದಾರೆ ಎಂದು ವರದಿಯಾಗಿದೆ. ದೇಣಿಗೆ ದುರುಪಯೋಗದ ಆರೋಪಗಳ ನಡುವೆ ಟ್ರಸ್ಟ್ ಹೊಸ ಸಿಇಒ ಆಯ್ಕೆಗಾಗಿ ಮೂವರು ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಿದೆ. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದ್ದು, ಅರ್ಹತಾ ಮಾನದಂಡಗಳ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಿ ವಿಂಗಡಿಸಲಾಗುತ್ತದೆ.
ಆಯ್ಕೆ ಸಮಿತಿಯ ಸದಸ್ಯರೊಬ್ಬರ ಪ್ರಕಾರ, ಮೊದಲ ದಿನವೇ ಅತಿಹೆಚ್ಚು ಅರ್ಜಿಗಳು ಬಂದಿರುವುದರಿಂದ ಅವುಗಳನ್ನು ಸಂಗ್ರಹಿಸಿ ಪರಿಶೀಲಿಸಲು ಕಾರ್ಯದರ್ಶಿಯನ್ನು ನೇಮಿಸುವ ಅಗತ್ಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 19ರಂದು ಸಮಿತಿ ಸಭೆ ನಡೆಸಿ ಮುಂದಿನ ಪ್ರಕ್ರಿಯೆಯ ಕುರಿತು ತೀರ್ಮಾನ ಕೈಗೊಳ್ಳಲಿದೆ.
ಅರ್ಜಿಗಳ ಪರಿಶೀಲನೆಗಾಗಿ ನೇಮಕವಾಗುವ ಕಾರ್ಯದರ್ಶಿ ನಿವೃತ್ತ ಸರ್ಕಾರಿ ಅಧಿಕಾರಿಯಾಗಿರಬಹುದು ಎಂದು ವರದಿಯಾಗಿದ್ದರೂ, ಈ ಕುರಿತು ಟ್ರಸ್ಟ್ ಅಧಿಕೃತ ಮಾಹಿತಿ ನೀಡಿಲ್ಲ. ಈ ಹುದ್ದೆಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಅಮಿತಾಭ್ ಠಾಕೂರ್ ಕೂಡ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.



