ಬೆಂಗಳೂರು : ಬಿಡದಿ ಟೌನ್ಶಿಪ್ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆಯನ್ನು ರಿಯಲ್ ಎಸ್ಟೇಟ್ ದಂಧೆ ಎಂದು ಆರೋಪಿಸುತ್ತಿರುವವರೇ ಹಿಂದೆ ಖಾಸಗಿ ಸಂಸ್ಥೆಗೆ ಯೋಜನೆಯ ಜವಾಬ್ದಾರಿ ನೀಡಿದ್ದರು ಎಂದು ಸಿಎಂ ಆರೋಪಿಸಿದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಹಳ್ಳಿಗಳು ಮತ್ತು ಅಲ್ಲಿನ ನಿವಾಸಿಗಳ ಜಮೀನುಗಳನ್ನು ಒಳಗೊಂಡಂತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದಕ್ಕಾಗಿ ಪರಿಹಾರ ಮಾರ್ಗಸೂಚಿಯನ್ನೂ ರೂಪಿಸಲಾಗಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಡಿಎಲ್ಎಫ್ ಸಂಸ್ಥೆಗೆ ಯೋಜನೆಯ ಜವಾಬ್ದಾರಿ ನೀಡಿ, ಅವರಿಂದ ₹400 ಕೋಟಿ ಭದ್ರತಾ ಠೇವಣಿ ಪಡೆಯಲಾಗಿತ್ತು ಎಂದು ಆರೋಪಿಸಿದ ಸಿಎಂ, ರೈತರಿಗೆ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಶೇ.40ರಷ್ಟು ಭೂಮಿ ನೀಡುವ ಪ್ರಸ್ತಾವನೆ ಮಾಡಲಾಗಿತ್ತು ಎಂದರು.
“ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ನಾನಾ? : ಡಿಎಲ್ಎಫ್ ಸಂಸ್ಥೆಗೆ ಪತ್ರ ಬರೆದು ಭದ್ರತಾ ಠೇವಣಿ ಕಟ್ಟಬೇಕು, 15 ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಸೂಚಿಸಿದವರು ಯಾರು? ರಿಯಲ್ ಎಸ್ಟೇಟ್ ದಂಧೆ ಮಾಡಿದ್ದು ನಾನಾ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
2006ರ ಸೆಪ್ಟೆಂಬರ್ 23ರಂದು ನಡೆದ ಸಭೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ಹಂತ ಹಂತವಾಗಿ ಜಮೀನು ನೀಡುವ ಕುರಿತು ಚರ್ಚೆಯಾಗಿತ್ತು ಎಂದು ಹೇಳಿದ ಅವರು, ಇದನ್ನು ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯಬೇಕಾ ಅಥವಾ ಕುಟುಂಬದ ದಂಧೆ ಎಂದು ಕರೆಯಬೇಕಾ? ಎಂದು ವಾಗ್ದಾಳಿ ನಡೆಸಿದರು.
ಬಿಡದಿ ಟೌನ್ಶಿಪ್ ವಿಚಾರದಲ್ಲಿ ರೈತರನ್ನು ರಾಜಕೀಯ ಹೋರಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಸಿಎಂ, ಯಾವ ರೈತರಿಗಾಗಿ ಹೋರಾಟ ಮಾಡುತ್ತಿದ್ದೀರಿ? ಈಗ ಯಾರ ಮೇಲೆ ಆರೋಪ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.



