ಮಂಡ್ಯ: ಹೆಣ್ಣುಮಕ್ಕಳಿಗೆ ಸೀಮಂತ ಮಾಡುವ ರೀತಿ ವಿಶಿಷ್ಟ ರೀತಿಯಲ್ಲಿ ಹಸುವಿಗೆ ಸೀಮಂತ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮುದ್ದಗೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಜಪ್ಪ ಎಂಬುವವರ ಮನೆಯಲ್ಲಿ ಕುಟುಂಬಸ್ಥರು ಸೇರಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿದ್ದಾರೆ.
ಕೊಬ್ಬರಿ, ಬೆಲ್ಲ,ಹೂವು,ಹಣ್ಣು, ಕಲ್ಲುಸಕ್ಕರೆ,ಕರ್ಜೂರ,ದ್ರಾಕ್ಷಿ, ಗೋಡಂಬಿ, ಬಳೆ, ಅರಿಶಿಣ-ಕುಂಕುಮ, ಸೀರೆ ಇಟ್ಟು ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಹಸುವಿಗೆ ಉಡುಗೆಯನ್ನು ತೊಡಿಸಿ ಸಂಭ್ರಮ ಸಡಗರದಿಂದ ಸೀಮಂತ ಕಾರ್ಯ ಮಾಡಿದ್ದಾರೆ.
ಬಂಧು ಬಾಂದವರನ್ನು ಕರೆಸಿ, ಗ್ರಾಮಸ್ಥರೆಲ್ಲರಿಗೂ ಅಡುಗೆ ಮಾಡಿಸಿ ಉಣಬಡಿಸಿದ್ದಾರೆ.
ರೈತರಿಗೆ ಸಾಕು ಪ್ರಾಣಿಗಳು ಮನೆಯ ಸದಸ್ಯರಿದ್ದಂತೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಸಮೃದ್ಧವಾಗಿರುತ್ತೇವೆ. ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ನಾವು ಭಾವಿಸಿದ್ದೇವೆ. ನಮ್ಮ ಮನೆಯಲ್ಲಿ ಸೀಮಂತ ಮಾಡುತ್ತಿರುವುದರಿಂದ ಸಂಭ್ರಮ ಮನೆ ಮಾಡಿದೆ. ಹಸುವಿನ ಸೀಮಂತ ಮಾಡುತ್ತಿರುವುದು ವಿಶೇಷ ಮತ್ತು ವಿಶಿಷ್ಟವಾಗಿದೆ. ಇದೊಂದು ಮಾದರಿ ಕಾರ್ಯ. ಹೆಣ್ಣುಮಕ್ಕಳಿಗೆ ಮಾಡುವ ಸೀಮಂತ ಕಾರ್ಯದ ರೀತಿ ಮಾಡಿದ್ದೇವೆ. ಸಾಕು ಪ್ರಾಣಿಗಳನ್ನು ನಾವು ಗೌರವ ಮತ್ತು ಭಕ್ತಿಯಿಂದ ಕಾಣಬೇಕಾದದ್ದು ಧರ್ಮನೀಯ ಕಾರ್ಯ ಎಂದು ಕುಟುಂಬಸ್ಥರ ಕಾರ್ಯಕ್ಕೆ ಸಾಕಮ್ಮ ಎಂಬುವವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.