ಹನೂರು: ಮಲೆಮಹದೇಶ್ವರ ವನ್ಯಧಾಮದ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ರಾಮಾಪುರ ಠಾಣಾ ವ್ಯಾಪ್ತಿಯ ಮೀಣ್ಯಂ ಅರಣ್ಯದಲ್ಲಿರುವ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು, ವೀರಪ್ಪನ್ ಗುಂಡಿಗೆ ಬಲಿಯಾ ದ ಅಧಿಕಾರಿಗಳು, ಸಿಬ್ಬಂದಿಗಳ ಕುಟುಂಬವರ್ಗದವರು ಹಾಜರಿ ದ್ದು ನಮಿಸಿದರು. ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಅಲ್ಲದೇ ದಾಳಿಯಲ್ಲಿ ಹುತಾತ್ಮ ರಾದವರ ಕುಟುಂಬದವರನ್ನು ಸನ್ಮಾನಿಸಲಾಯಿತು. 1992ರ ಆ. 14 ರಂದು ವೀರಪ್ಪನ್ ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಅಧೀಕ್ಷಕ ಟಿ.ಹರಿಕೃಷ್ಣ, ಪಿಎಸ್‌ಐ ಶಕೀಲ್ ಅಹಮ್ಮದ್, ಎಎಸ್‌ಐ ಸೋಮಪ್ಪ, ಸಿಬ್ಬಂದಿಗಳಾದ ಸಿ.ಎಂ.ಕಾಳಪ್ಪ, ಸುಂದರ್, ಕೆ. ಎಂ.ಅಪ್ಪಚ್ಚು ನರಹಂತಕ ವೀರಪ್ಪನ್ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದು ಹಲವು ಗಾಯಗೊಂಡಿದ್ದರು. ಘಟನೆ ನಡೆದು ಆ.14ಕ್ಕೆ 31 ವರ್ಷ ಪೂರೈಸಿದೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸೋಮೇಗೌಡ, ರಾಮಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂತೋಷ ಕಶ್ಯಪ್, ಸಬ್ ಇನ್ಸ್ಪೆಕ್ಟರ್ ಎಸ್.ರಾಧ, ಹುತಾತ್ಮರ ಕುಟುಂಬದವರಾದ ಅಪ್ಪಚ್ಚು ಅಣ್ಣ ನಾಚಪ್ಪ, ಸುಂದರ್ ಅವರ ಅಕ್ಕ ಶಾರದ, ಕಾಳಪ್ಪ ಅವರ ಪತ್ನಿ ಮತ್ತು ಕುಟುಂಬ, ನಿವೃತ್ತ ಪೊಲೀಸ್ ಅಧೀಕ್ಷಕ ಉಮೇಶ್, ಟೈಗರ್ ಅಶೋಕ್ ಕುಮಾರ್ ಅವರ ಅಭಿಮಾನಿಗಳ ಬಳಗದ ಮೈಸೂರು ಮಂಜು ಸೇರಿದಂತೆ ಇತರರಿದ್ದರು.