ಮಂಗಳೂರು(ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲೆಯ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಳಡಿಸಬೇಕು ಮತ್ತು ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯ ಬಹಿರಂಗಪಡಿಸಬೇಕು ಎಂದು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮೀಷನರ್ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
2011 ರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧಿತವಾದ ಆರೋಪಿಯನ್ನು ನಿರಪರಾಧಿಯೆಂದು ನ್ಯಾಯಾಲಯವು ಘೋಷಿಸಿದ್ದು ನೈಜ ಅಪರಾಧಿಗಳು ಯಾರೆಂದು ಇಲ್ಲಿಯವರೆಗೂ ಪತ್ತೆ ಆಗಿರುವುದಿಲ್ಲ.
ಘಟನೆಯ ಕುರಿತ ತನಿಖೆಯ ಹಂತದಲ್ಲಿ ಯಾವುದೋ ಒತ್ತಡದಲ್ಲಿ ತನಿಖಾಧಿಕಾರಿಗಳು ಸಾಕ್ಷಿ ಮತ್ತು ದಾಖಲೆಗಳನ್ನು ಒದಗಿಸುವಲ್ಲಿ ಉದ್ದೇಶ ಪೂರ್ವಕವಾಗಿ ತಪ್ಪು ಮಾಡಿರುವುದು ಕಂಡು ಬರುತ್ತದೆ. ಒಬ್ಬ ನಿರಪರಾಧಿಯ ಮೇಲೆ ಪ್ರಥಮ ವರ್ತಮಾನ ವರದಿ ಮತ್ತು ದೋಷಾರೋಪಣ ಪಟ್ಟಿ ಸಲ್ಲಿಸಿರುತ್ತಾರೆ. ನಿಜವಾದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿಗಳು ಆರೋಪಿಗಳ ಹೆಸರುಗಳನ್ನು ನೇರವಾಗಿ ಉಲ್ಲೇಖ ಮಾಡಿದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಓರ್ವ ನಿರಪರಾಧಿಯ ಹೆಸರನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಿರುತ್ತಾರೆ.
ಇದು ಇದೇ ರೀತಿಯಲ್ಲಿ ಮುಂದುವರಿದಲ್ಲಿ ಇಂತಹ ಅಮಾನವೀಯ ಕೃತ್ಯಗಳು ಇನ್ನಷ್ಟು ಆಗುವುದರಲ್ಲಿ ಸಂಶಯವಿಲ್ಲ. ಈ ಪ್ರಕರಣವನ್ನು ಮರು ತನಿಖೆಯನ್ನು ನ್ಯಾಯಾಂಗ ತನಿಖೆಯ ಮೂಲಕ ತನಿಖಾಧಿಕಾರಿಗಳನ್ನು ಮಂಪರು ಪರೀಕ್ಷೆಗೊಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ಆಗುವಂತೆ ಮಾಡಿ ಸಮಾಜದಲ್ಲಿ ಹೆಣ್ಣು ಮಕ್ಳು ಗೌರವದಿಂದ ಬದುಕುವ ಹಾಗೆ ಮಾಡಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ಲಿಂಗಪ್ಪ ಗೌಡ ತೆಂಕಿಲ, ಸುರೇಶ್ ಗೌಡ ಕಲ್ಲಾರೆ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರ್, ಒಕ್ಕಲಿಗ ಗೌಡ ಸಮುದಾಯ ಭವನದ ಉಸ್ತವಾರಿ ದಯಾನಂದ ಕೆ ಎಸ್ , ವಸಂತ ವೀರಮಂಗಲ, ಶ್ರೀಧರ್ ಗೌಡ ಕಣಜಾಲು, ರಾಮಕೃಷ್ಣ ಗೌಡ, ತೀರ್ಥರಾಮ ಕೆಡೆಂಜಿ, ಉಮೇಶ್, ಸೂರಪ್ಪ ಗೌಡ, ಮೋಹನ್ ಗೌಡ ಮತ್ತಿತರರು ಉಪಸ್ಥಿತರಿದ್ದರು.