ಮಂಗಳೂರು(ದಕ್ಷಿಣ ಕನ್ನಡ): ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಗರದ ನೆಹರೂ ಮೈದಾನದಲ್ಲಿ ಆ.15ರ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ಇಂದು ನಮಗೆಲ್ಲ ಸಂತಸದ ದಿನ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರಿಗೆ ಹಾಗೂ ಹುತಾತ್ಮರಿಗೆ ಗೌರವ ಸಲ್ಲಿಸಲು, ಸ್ವಾತಂತ್ರ್ಯ ಭಾರತದಲ್ಲಿ ನಡೆದು ಬಂದ ದಾರಿಯನ್ನು ಹಾಗೂ ಅದರ ಏಳುಬೀಳುಗಳನ್ನು ಸ್ಮರಿಸುತ್ತಾ, ದೇಶದ ಉಜ್ವಲ ಭವಿಷ್ಯಕ್ಕಾಗಿ ಕನಸುಕಟ್ಟಿಕೊಳ್ಳಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಈ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹತ್ವದ ಘಟನೆಗಳನ್ನು ಮತ್ತು ಮುಖ್ಯ ಆಶಯಗಳನ್ನು ನಾವು ಸ್ಮರಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರ ಆಶಯಗಳು ಮತ್ತು ಕನಸುಗಳನ್ನು ನನಸಾಗಿಸಲು ನಾವೆಲ್ಲರೂ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದರು.
ನಮ್ಮದು ಜನಪರ ಸರ್ಕಾರ, ನಾಡಿನ ಶ್ರೇಯೋಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯ ಕರ್ತವ್ಯ, ನಾಡಿನ ಜನತೆಗೆ ನೀಡಿದ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ನಾವು ಕಟಿಬದ್ಧರಾಗಿದ್ದವೆ.
ಸತತವಾಗಿ 14ನೇ ಬಾರಿಗೆ ಬಜೆಟ್ ಮಂಡಿಸಿದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಪ್ರತಿ ಬಜೆಟ್‍ನಲ್ಲೂ ಮಹಿಳೆಯರು, ಶ್ರಮಿಕರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದ ಬಡ ಜನರಿಗೆ ಭದ್ರತೆಯನ್ನು ಒದಗಿಸುತ್ತಾ ಬಂದಿದ್ದಾರೆ. ಅದೇ ರೀತಿಯಲ್ಲಿ ಈ ಬಾರಿ ಕೂಡ ಸರ್ವರಿಗೂ ಸಮ್ಮತವಾಗುವಂತಹ ಬಜೆಟ್ ಅನ್ನು ಮಂಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದ್ದು, ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ ಸೌಹಾರ್ದತೆ ಕೆಡಿಸುವ ವಿಚ್ಚಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನಮ್ಮ ಜಿಲ್ಲೆಯ ಪ್ರಮುಖ ಕಸುಬು ಮೀನುಗಾರಿಕೆಯಾಗಿದ್ದು, ಒಟ್ಟು 42 ಕಿ.ಮೀ. ಸಮುದ್ರ ತೀರವಿರುವ ಜಿಲ್ಲೆಯಲ್ಲಿ 66 ಸಾವಿರಕ್ಕೂ ಹೆಚ್ಚಿನ ಮೀನುಗಾರರಿದ್ದಾರೆ. ಅವರ ಅನುಕೂಲಕ್ಕೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಕರಾವಳಿ ಗ್ಯಾರಂಟಿಗಳಲ್ಲಿ ಈ ಬಾರಿಯ ಆಯವ್ಯಯದಲ್ಲಿ ಹಲವು ಪ್ರೋತ್ಸಾಹಕರ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕ್‍ಗಳಲ್ಲಿ 3 ಲಕ್ಷ ರೂ.ಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಸೀಮೆಎಣ್ಣೆಯನ್ನು 1.50ಲಕ್ಷ ಕಿಲೋ ಲೀಟರ್‍ನಿಂದ 2 ಲಕ್ಷ ಕಿಲೋ ಲೀಟರ್ ವರೆಗೆ ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯಿಂದ ಮೀನುಗಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಇದಕ್ಕಾಗಿ 250 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಪ್ರಸ್ತುತ ಸೀಮೆಎಣ್ಣೆ ಎಂಜಿನ್ ಗಳಿರುವ ಮೀನುಗಾರಿಕಾ ಬೋಟ್ ಗಳನ್ನು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್‍ಗ ಳಾಗಿ ಬದಲಾಯಿಸಿಕೊಂಡರೆ ತಲಾ 50 ಸಾವಿರ ರೂಪಾಯಿಗಳ ವರೆಗೆ ಸಹಾಯಧನ ನೀಡಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಇಂತಹ ನಾಲ್ಕು ಸಾವಿರ ಮೀನುಗಾರಿಕಾ ದೋಣಿಗಳಲ್ಲಿನ ಎಂಜಿನ್ ಗಳನ್ನು ಬದಲಾಯಿಸಲು 20 ಕೋಟಿಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಪ್ರೋತ್ಸಾಹ:
ಜಲಸಂಪನ್ಮೂಲಗಳನ್ನು ಬಳಸಿಕೊಂಡು ಕಾಟ್ಲಾ, ರೋಹು ಸೇರಿದಂತೆ ಬೇಡಿಕೆ ಇರುವ ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಿಗಡಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಕ್ರಮವಹಿಸಲಾಗುತ್ತದೆ. ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ಪಿಕಪ್ ವ್ಯಾನ್ ಖರೀದಿಸಲು 7 ಲಕ್ಷ ರೂ.ವರೆಗಿನ ಸಾಲವನ್ನು ಶೇ.4ರ ಬಡ್ಡಿ ದರದಲ್ಲಿ ವಿತರಿಸುವ ಪ್ರಸ್ತಾಪವು ರೈತರಿಗೆ ನೆರವಾಗಲಿದೆ.
ರಾಷ್ಟ್ರೀಯ ವಿಪತ್ತು ಉಪಶಮನಗಳ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಐದು ಜಿಲ್ಲೆಗಳಿಗೆ 721 ಕೋಟಿ ರೂ.ನಲ್ಲಿ ಭೂಕುಸಿತ ಹಾಗೂ ನೆರೆ ಅಪಾಯ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು.
ಸಸಿಹಿತ್ಲು ಬೀಚ್ ಅನ್ನು ಅಂತಾರಾಷ್ಟ್ರೀಯ ಸರ್ಫಿಂಗ್ ತಾಣವನ್ನಾಗಿಸುವುದಕ್ಕಾಗಿ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯ ಬೀಚ್ ಟೂರಿಸಂ ಅಭಿವೃದ್ಧಿಗೆ ಕಾರ್ಯಪಡೆ ರಚನೆಯಾಗಲಿದೆ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಈ ವರ್ಷ ಪೂರ್ಣಗೊಂಡು ಎಲ್ಲಾ ಸೇವೆಗಳನ್ನು ಒಂದೇ ಸೂರಿನಲ್ಲಿ ಒದಗಿಸಲಾಗುವುದು.
ಮುಖ್ಯವಾಗಿ ರಾಜ್ಯದ ಪವಿತ್ರ ತೀರ್ಥ ಸ್ಥಳ ಧರ್ಮಸ್ಥಳದಲ್ಲಿ ಪುಟ್ಟ ವಿಮಾನ ನಿಲ್ದಾಣ (ಏರ್ ಸ್ಟ್ರಿಪ್ ) ನಿರ್ಮಿಸಲು ಮುಂದಾಗಿರುವುದರಿಂದ ಟೂರಿಸಂ ಕೈಗಾರಿಕಾ ವಲಯಕ್ಕೆ ಉತ್ತೇಜನ ಸಿಗಲಿದೆ.
ಮೀನುಗಾರಿಕೆ ಇಲಾಖೆ:
ಜಿಲ್ಲೆಯಲ್ಲಿ 23 ಮೀನುಗಾರರ ಸಹಕಾರಿ ಸಂಘಗಳು ಹಾಗೂ ಮೀನುಗಾರಿಕಾ ಫೆಡರೇಶನ್ ಇದೆ. ಅವುಗಳಲ್ಲಿ ಒಟ್ಟು 35,970 ಸದಸ್ಯರಿದ್ದಾರೆ. ಈ ಪೈಕಿ 4 ಮೀನುಗಾರ ಮಹಿಳೆಯರ ಸಹಕಾರಿ ಸಂಘಗಳೂ ಇವೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 102 ಪರ್ಸೀನ್ ದೋಣಿಗಳು 1,354 ಟ್ರಾಲ್‍ದೋಣಿಗಳು, 1,674 ಯಾಂತ್ರೀಕೃತ ನಾಡದೋಣಿಗಳು ಹಾಗೂ 318 ನಾಡದೋಣಿಗಳು ಮೀನುಗಾರಿಕೆಯಲ್ಲಿ ಕಾರ್ಯ ನಿರತವಾಗಿದ್ದು, 2022-23ನೇ ಸಾಲಿನಲ್ಲಿ ರೂ. 4,154 ಕೋಟಿ ಮೌಲ್ಯದ 3.33 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಜಿಲ್ಲೆಗೆ ಉತ್ತಮ ಹೆಸರಿದೆ. ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಹಾಗೂ ಉತ್ತಮ ಸೇವೆ ನೀಡುತ್ತಿರುವ 12 ನಮ್ಮ ಕ್ಲಿನಿಕ್, 4 ಮಹಿಳಾ ಸ್ವಾಸ್ಥ್ಯ ಕ್ಲಿನಿಕ್‍ಗಳಲ್ಲಿ 40 ಸಾವಿರಕ್ಕೂ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 28 ಆಂಬ್ಯುಲೆನ್ಸ್ ಹಾಗೂ 02 ಬೈಕ್ ಆಂಬ್ಯುಲೆನ್ಸ್‍ಗಳಿದ್ದು, 2022-23ನೇ ಸಾಲಿನಲ್ಲಿ ಒಟ್ಟು 17,290 ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಸೇವೆ ಒದಗಿಸಲಾಗಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ 2022-23ನೇ ಸಾಲಿನಲ್ಲಿ 69,018 ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದು, 10,552 ಲಕ್ಷ ರೂ.ಗಳು ಪಾವತಿಯಾಗಿರುತ್ತದೆ.
ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿ 2022-23ನೇ ಸಾಲಿನಲ್ಲಿ 2,309 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಾಲಾ ಮಕ್ಕಳ ದೃಷ್ಠಿ ಪರೀಕ್ಷಾ ಕಾರ್ಯಕ್ರಮದಲ್ಲಿ 1,74,211 ಮಕ್ಕಳ ದೃಷ್ಠಿ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ದೃಷ್ಠಿ ದೋಷ ಕಂಡು ಬಂದಂತಹ 2,142 ಮಕ್ಕಳಿಗೆ ಉಚಿತ ಕನ್ನಡಕ ವಿತರಿಸುವ ಕ್ರಮ ಕೈಗೊಳ್ಳಲಾಗಿದೆ.
ಕೃಷಿ ಇಲಾಖೆ:
2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 9,390 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಇದುವರೆಗೆ 4,722 ಹೆಕ್ಟೇರ್ ಕ್ಷೇತ್ರದಲ್ಲಿ ಭತ್ತದ ಬಿತ್ತನೆಯಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ 568 ಕ್ವಿಂಟಾಲ್ ಬಿತ್ತನೆ ಬೀಜವನ್ನು 1,771 ರೈತರಿಗೆ ವಿತರಿಸಲಾಗಿದೆ.
ಮುಂಗಾರು ಬೆಳೆ ಸಮೀಕ್ಷೆ ಯೋಜನೆಯಡಿ ಶೇ.98 ರೈತರ ತಾಲೂಕುಗಳಲ್ಲಿ ಬೆಳೆದ ಬೆಳೆಯನ್ನು ತಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೆ ಕೇಂದ್ರ ಸರ್ಕಾರ ವಾರ್ಷಿಕ 6,000 ರೂ.ಗಳನ್ನು 3 ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರ ವಾರ್ಷಿಕ 4,000 ರೂ.ಗಳನ್ನು 2 ಕಂತುಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ. ಜಿಲ್ಲೆಯ ಒಟ್ಟು 1,39,571 ರೈತರಿಗೆ ಕೇಂದ್ರದ ಪಾಲಿನ ಒಟ್ಟು ರೂ.333.03 ಕೋಟಿ ಮೊತ್ತ ರೈತರ ಖಾತೆಗೆ ಜಮೆ ಮಾಡಲಾಗಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ:
ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು. ಜಿಲ್ಲೆಯ ಕಿನ್ನಿಗೋಳಿ, ಮಳವೂರು, ಕರೋಪಾಡಿ, ಸಂಗಬೆಟ್ಟು, ಮಾಣಿ, ಸರಪಾಡಿ ಮತ್ತು ನರಿಕೊಂಬು ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಗ್ರಾಮೀಣ ರಸ್ತೆ:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಕಾಮಗಾರಿಯು 3336 ಕಿ.ಮೀ ಉದ್ದದ ರಸ್ತೆಯು ಪೂರ್ಣಗೊಂಡಿರುತ್ತದೆ. 2023-24ನೇ ಸಾಲಿಗೆ 3054 ಸಿ.ಎಂ.ಜಿ.ಎಸ್.ವೈ ರಡಿ 606 ಲಕ್ಷ ರೂ.ಗಳ ಅನುದಾನ ನಿಗದಿಯಾಗಿದ್ದು, ಕ್ರಿಯಾ ಯೋಜನೆ ತಯಾರಿ ಹಂತದಲ್ಲಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:
ಈ ಯೋಜನೆಯಡಿ 2023-24ನೇ ಸಾಲಿನವರೆಗೆ ಜಿಲ್ಲೆಯಲ್ಲಿ 1,61,918 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಒಟ್ಟು 17 ಲಕ್ಷ ಮಾನವ ದಿನಗಳ ಸೃಜನೆ ಹಾಗೂ 9,490 ಲಕ್ಷ ರೂ.ಗಳು ಆರ್ಥಿಕ ಗುರಿ ನಿಗದಿ ಪಡಿಸಿದೆ. ಆ ಪೈಕಿ 2023ರ ಜುಲೈ ಅಂತ್ಯಕ್ಕೆ 5.38 ಲಕ್ಷ ಮಾನವ ದಿನಗಳನ್ನು ಸೃಜಿಸಿ, 2,935 ಲಕ್ಷ ರೂ.ಗಳು ವೆಚ್ಚ ಮಾಡಲಾಗಿದೆ.
ಗ್ರಾಮೀಣ ವಸತಿ ಯೋಜನೆ:
2021-22ನೇ ಸಾಲಿಗೆ ಜಿಲ್ಲೆಗೆ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ (ಗ್ರಾಮೀಣ)ಯೋಜನೆಯಡಿ 7,626 ಮನೆಗಳಿಗೆ ಅನುಮೋದನೆಗೊಂಡಿದ್ದು, 2,738 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2021-22ನೇ ಸಾಲಿನ ಪ್ರಧಾನ ಮಂತ್ರಿ ಅವಾಸ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಗೆ 229 ಫಲಾನುಭವಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗಿದ್ದು ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:
ರಾಜ್ಯ ಸರ್ಕಾರವು ಈಗಾಗಲೇ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದ ಮಹಿಳೆಯರು ಸರ್ಕಾರಿ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ ಬೆಳಸಿ ಯೋಜನೆಯ ಸಾಪಲ್ಯ ಪಡೆಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಈವರೆಗೆ 2,64,337 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಈ ತಿಂಗಳ ಅಂತ್ಯದಲ್ಲೇ ಈ ಯೋಜನೆ ಜಾರಿಯಾಗಲಿದೆ. ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆ ಹೊಂದಿ 6 ತಿಂಗಳಾದರೂ ಉದ್ಯೋಗ ಸಿಗದಿದ್ದಲ್ಲಿ ಅಂತಹ ಉದ್ಯೋಗಾಂಕ್ಷಿಗಳಿಗೆ ಪ್ರೋತ್ಸಾಹ ಧನ ನೀಡುವ ಯುವನಿಧಿ ಯೋಜನೆಯು ಜಾರಿಯಾಗಲಿದೆ.
ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ:
ಅನ್ನ ಭಾಗ್ಯ ಯೋಜನೆಯಿಂದ ಅಸಂಖ್ಯಾತ ಜನರು ಹಸಿವು ಮುಕ್ತರಾಗಿದ್ದಾರೆ. ಜುಲೈ-2023 ರ ಮಾಹೆಯಿಂದ ಈ ಯೋಜನೆಯಡಿ (ನೇರ ನಗದು ವರ್ಗಾವಣೆ) ಜಾರಿಯಾಗಿದ್ದು, ಜುಲೈ-2023ರ ಮಾಹೆಯಲ್ಲಿ ಜಿಲ್ಲೆಯ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮೂಲಕ ಜಿಲ್ಲೆಯಲ್ಲಿನ ಒಟ್ಟು 5,86,488 ಫಲಾನುಭವಿಗಳಿಗೆ, ಮೂವತ್ತೊಂದು ಕೋಟಿ, ಐವತ್ತೆರಡು ಲಕ್ಷದ, ಎಪ್ಪತ್ತೊಂಭತ್ತು ಸಾವಿರದ ಎಂಟು ನೂರು ರೂಪಾಯಿಗಳನ್ನು (31,52,79,800) ಪಡಿತರ ಚೀಟಿಯಲ್ಲಿನ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
ಶಕ್ತಿ ಯೋಜನೆ:
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗದಲ್ಲಿ 03 ಘಟಕಗಳು, 01 ಬಸ್ಸುನಿಲ್ದಾಣ ಹಾಗೂ ಪುತ್ತೂರು ವಿಭಾಗವು 04 ಘಟಕಗಳು, 07 ಬಸ್ಸು ನಿಲ್ದಾಣಗಳಿವೆ. ಕರ್ನಾಟಕ “ಶಕ್ತಿ ಯೋಜನೆಯನ್ನು ದಿನಾಂಕ: 11.06.2023 ರಿಂದ ಅನುಷ್ಠಾನಗೊಳಿಸಿದ್ದು, ಅದರಂತೆ ಮಂಗಳೂರು ವಿಭಾಗದಲ್ಲಿ 2023ರ ಜೂನ್‍ನಲ್ಲಿ 6.54 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಆ ಮೊತ್ತ 241.53 ಲಕ್ಷ ರೂ.ಗಳಾಗಿರುತ್ತದೆ ಹಾಗೂ ಪುತ್ತೂರು ವಿಭಾಗದಲ್ಲಿ 14.32 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಆ ಮೊತ್ತ 440.94 ಲಕ್ಷ ರೂ.ಗಳಾಗಿರುತ್ತವೆ.
ಗೃಹ ಜ್ಯೋತಿ:
ಬಡ ಮತ್ತು ಮಧ್ಯಮ ವರ್ಗಕ್ಕೆ ಬಹು ಉಪಯೋಗಕಾರಿಯಾದ ಗೃಹ ಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಜಿಲ್ಲೆಯಲ್ಲಿರುವ 5.59 ಲಕ್ಷ ಗ್ರಾಹಕರಲ್ಲಿ 4.41 ಲಕ್ಷ ಗ್ರಾಹಕರನ್ನು ಈ ವರೆಗೆ ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ 1.39 ಲಕ್ಷ ಗ್ರಾಹಕರಿಗೆ ಈವರೆಗೆ ಶೂನ್ಯ ಬಿಲ್ಲನ್ನು ವಿತರಿಸುವ ಮೂಲಕ 8.91 ಕೋಟಿ ವಿನಾಯಿತಿಯನ್ನು ಜಿಲ್ಲೆಯ ಜನರಿಗೆ ನೀಡಲಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆದು 200 ಯುನಿಟ್‍ಗಳ ಗೃಹ ಬಳಕೆಯ ವಿದ್ಯುತ್‍ನ್ನು ಉಚಿತವಾಗಿ ನೀಡುತ್ತಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ:
ಕರ್ನಾಟಕದಲ್ಲಿ ಐಟಿಉದ್ಯಮವು ಹೆಚ್ಚಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದೆ. ಬೆಂಗಳೂರಿನಾಚೆ ಶ್ರೇಣಿ 2ರ ನಗರಗಳಲ್ಲಿ ಐಟಿ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರವು “ಬ್ರಾಂಡ್ ಬೆಂಗಳೂರು ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಗಳೂರಿನ ಗಂಜಿಮಠದಲ್ಲಿ ಬಹುನಿರಿಕ್ಷೀತ ಪ್ಲಾಸ್ಟಿಕ್ ಪಾರ್ಕ್ 104 ಎಕರೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗುತ್ತಿದ್ದು, ಕಾಮಗಾರಿ ಪ್ರಾರಂಭವಾಗಿದೆ. ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. 2022-23ನೇ ಸಾಲಿಗೆ ಜಿಲ್ಲೆಯಲ್ಲಿ 517 ಜನ ಈ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ ಎಂದು ತಿಳಿಸಿದರು.
ಅರಣ್ಯ ಇಲಾಖೆ:
ಸರ್ಕಾರಿ ಸ್ಥಳಗಳು, ರಸ್ತೆಬದಿಗಳು, ಶೈಕ್ಷಣಿಕ ಸಂಸ್ಥೆಗಳ ಆವರಣ, ಆಸ್ಪತ್ರೆಗಳ ಆವರಣ, ರೈತರ ಜಮೀನುಗಳ ಕೆರೆ ಅಂಗಳದಲ್ಲಿ ಅರಣ್ಯ ಇಲಾಖೆಯಿಂದ ಒಟ್ಟು 35,000ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಒಟ್ಟು 6,31,000 ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶದ ದಟ್ಟಣೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಹಸಿರು ಆಯವ್ಯಯ ಕಾರ್ಯಕ್ರಮದಡಿ ಮಂಗಳೂರು ಅರಣ್ಯ ವಿಭಾಗದಲ್ಲಿ ಕರಾವಳಿ ತೀರದ ಕಡಲ್ಕೊರೆತವನ್ನು ತಡೆಗಟ್ಟಲು 10 ಹೆಕ್ಟೇರ್ ಪ್ರದೇಶದಲ್ಲಿ ಇಕೋ ರೆಸ್ಟೋರೇಶನ್ ಮಾದರಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ಕರಾವಳಿ ತೀರದಲ್ಲಿ ನೆಡುವುದು ಹಾಗೂ ಶೆಲ್ಟರ್ ಬೆಲ್ಟ್ (ಆಶ್ರಯ ಪಟ್ಟಿ) ನಿರ್ಮಿಸಿ ಕರಾವಳಿ ತೀರದಲ್ಲಿ ವಾಸಿಸುವ ಜನರ ಹಾಗೂ ಜೀವಸಂಕುಲಗಳನ್ನು ರಕ್ಷಿಸಲು ಮಾದರಿ ನೆಡುತೋಪನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಪ್ರವಾಸೋದ್ಯಮ ಇಲಾಖೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ದಿಗೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದು ಪ್ರವಾಸೋದ್ಯಮ ಇಲಾಖೆಯಿಂದ ಅಂದಾಜು ವೆಚ್ಚ 236 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ನಾನಘಟ್ಟವನ್ನು ಪ್ರವಾಸೋದ್ಯಮ ಇಲಾಖೆಯಿಂದ 483 ಲಕ್ಷಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ:
ಜಿಲ್ಲೆಯಲ್ಲಿ 1ರಿಂದ10ನೇ ತರಗತಿವರೆಗೆ ಒಟ್ಟು 3,24,139 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಶೇಕಡಾ 90.48 ಫಲಿತಾಂಶ ದಾಖಲಿಸಿದೆ. ಜಿಲ್ಲೆಯ 141 ಶಾಲೆಗಳು ಶೇಕಡಾ 100 ಫಲಿತಾಂಶ ಪಡೆದಿವೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಯ 1,19,038 ವಿದ್ಯಾರ್ಥಿಗಳು ಮೊಟ್ಟೆ, ಚಿಕ್ಕಿ ಬಾಳೆಹಣ್ಣು ಹಾಗೂ 1,52,593 ವಿದ್ಯಾರ್ಥಿಗಳಿಗೆ ಮಧ್ಯಾಹ್ನದಲ್ಲಿ ಉಚಿತ ಉಪಹಾರ ನೀಡಲಾಗುತ್ತಿದೆ. ಆರ್.ಬಿ.ಎಸ್.ಕೆ. ಯೋಜನೆಯಡಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವಿವೇಕಾ ಶಾಲಾ ಯೋಜನೆಯಡಿ 41 ಕೋಟಿ ರೂ. ವೆಚ್ಚದಲ್ಲಿ 288 ತರಗತಿ ಕೊಠಡಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 4ಕೋಟಿ ವೆಚ್ಚದಲ್ಲಿ 125 ಶಾಲಾ ಕಟ್ಟಡಗಳ ದುರಸ್ಥಿ ಕೈಗೊಳ್ಳಲಾಗಿದೆ. 3 ಕೆ.ಪಿ.ಎಸ್. ಶಾಲೆಗಳಿಗೆ 12 ಕೊಠಡಿ ನಿರ್ಮಾಣಕ್ಕಾಗಿ 2 ಕೋಟಿ 56 ಲಕ್ಷ ರೂ. ಬಿಡುಗಡೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಜನತೆಯನ್ನು ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹೀಗೆ ಅನೇಕ ಯೋಜನೆಗಳಡಿ ಒಂದಲ್ಲ ಒಂದು ರೀತಿ ಅಭಿವೃದ್ಧಿಯ ಮುಖ್ಯ ವಾಹಿನಿಗೆ ತರುವ ಪ್ರಯತ್ನವಾಗುತ್ತಿರುವುದು ಸಂತಸದ ವಿಷಯವಾಗಿದೆ. ಈ ರೀತಿಯ ವಾತಾವರಣ ಸೃಷ್ಟಿಸಿರುವ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಗೆ ಅಭಿನಂದನೆ ತಿಳಿಸಿದರು.
ವ್ಯಕ್ತಿಯ ಬದಲಾವಣೆಯಿಂದಲೇ ಒಂದು ದೇಶದ ಬದಲಾವಣೆ ಸಾಧ್ಯವಾಗುತ್ತದೆ. ಸಮಾಜದ ಎಲ್ಲ ವರ್ಗದ ಜನರೂ ಸಹೋದರತೆ ಮತ್ತು ಸಾಮರಸ್ಯದಿಂದ ಬಾಳುತ್ತಾ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯೋಣ, ಜಾತಿ-ಮತ, ಧರ್ಮ- ಭಾಷೆ, ಮೇಲು-ಕೀಳುಗಳನ್ನು ಮೀರಿ ಸಹಬಾಳ್ವೆ ನಡೆಸೋಣ. ಇಂದಿನ ಸ್ವಾತಂತ್ರ್ಯ ದಿನಾಚರಣೆ ನಮಗೆಲ್ಲ ರಾಷ್ಟ್ರಪ್ರೇಮದ ಸ್ಪೂರ್ತಿ ನೀಡಲಿ ಎಂದು ಆಶಿಸಿದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಆರ್ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷರಾದ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್ ಸಿ.ಎಲ್., ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪಥಸಂಚನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ನುಡಿದಂತೆ ನಡೆದಿದ್ದೇವೆ ಎಂಬ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆಗೊಳಿಸಿದರು.
ಅಪಾರ ಸಂಖ್ಯೆಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.