ಕೆ.ಆರ್.ನಗರ: ಮಗಳ ಹುಟ್ಟುಹಬ್ಬಕ್ಕಾಗಿ ಊರಿಗೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹೊಸಅಗ್ರಹಾರ ಗ್ರಾಮದ ರಾಮಶೆಟ್ಟಿ ಎಂಬುವವರ ಪುತ್ರ ವೀರಯೋಧ ಸುರೇಶ್(೪೦) ಹೃದಯಾಘಾತದಿಂದ ಸೋಮವಾರ ನಿಧನರಾದರು.
ಮೃತರು ಕಳೆದ ೧೯ ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತಿದ್ದರು.
ಆ.೨ರಂದು ರಜೆಯ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದು, ತಮ್ಮ ಐದು ವರ್ಷದ ಪುತ್ರಿ ಪೃಕೃತಿಯ ಹುಟ್ಟು ಹಬ್ಬದ ನಿಮಿತ್ತ ಡೋರ್ನಹಳ್ಳಿಯ ಅನಾಥಾಶ್ರಮಕ್ಕೆ ಊಟವನ್ನು ಕೊಡಲು ಬೆಳಿಗ್ಗೆ ೧೧-೦೦ ಗಂಟೆಯ ಸಮಯದಲ್ಲಿ ಮನೆಯಿಂದ ಹೊರಟು ನಿಂತಿದ್ದಾಗ ಎದೆ ನೋವು ಬಂದು ಅಸ್ವಸ್ಥಗೊಂಡಿದ್ದು, ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ಮೃತ ಸೈನಿಕನ ಪತ್ನಿ ಎ.ಎಂ.ಸೌಮ್ಯ ಮಧ್ಯಾಹ್ನ ೩-೩೦ರಲ್ಲಿ ಪಟ್ಟಣದ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಸೈನಿಕನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ಸುರೇಶ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತರು ಪತ್ನಿ ಸೌಮ್ಯ, ಪುತ್ರಿ ಪೃಕೃತಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.