ಮೈಸೂರು: ಇಂದಿನ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸ್ಪರ್ಧಾತ್ಮಕ ಮನೋಭಾವವಿದೆ. ಈ ಕಾರಣಕ್ಕೆ ಔದ್ಯೋಗಿಕ ಕ್ಷೇತ್ರಕ್ಕೆ ಕೌಶಲ್ಯಗಳಿಂದ ಕೂಡಿರುವ ಯುವ ಸಮುದಾಯದ ಅವಶ್ಯಕತೆ ಇದೆ. ಇಂದಿನ ನುರಿತ ಮತ್ತು ಬುದ್ಧಿವಂತ ವಿದ್ಯಾರ್ಥಿಗಳು ಭಾರತದ ಭವಿಷ್ಯದ ಶಕ್ತಿಯಾಗಿದ್ದಾರೆ ಎಂದು ಮೈಸೂರಿನ ಸಿಐಐ ಅಧ್ಯಕ್ಷ ಸ್ಯಾಮ್ ಚೆರಿನ್ ಅವರು ಅಭಿಪ್ರಾಯಪಟ್ಟರು.
ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಿಐಐ-ಇಂಡಸ್ಟ್ರಿ ಇನ್‌ಸ್ಟ್ಯೂಟ್ ಇಂಟ್ರ್ಯಾಕ್ಷನ್ ಅಂಡ್ ಹೈಯರ್ ಎಜುಕೇಶನ್ ಪ್ಯಾನಲ್, ಸಹಯೋಗದೊಂದಿಗೆ ಜಿ-೨೦ ಜನಭಾಗಿದಾರಿ ಕಾರ್ಯಕ್ರಮಗಳ ಅಡಿಯಲ್ಲಿ ಕೌಶಲ್ಯ ಕಾರ್ಯಕ್ರಮವಾದ ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೌಶಲಗಳನ್ನು ಪ್ರತಿದಿನವೂ ಬೆಳಸಿಕೊಳ್ಳುವ ಅನಿವಾರ್ಯತೆಯೂ ಇದೆ. ಇಂದಿನ ವಿದ್ಯಾರ್ಥಿಗಳು ವಿಶಿಷ್ಟ ಕೌಶಲ್ಯಗಳನ್ನು ಮೈಗೂಡಿಸಿಕೊಡಿಸಿಕೊಳ್ಳಬೇಕು. ವಿಶ್ವ ಮಟ್ಟದಲ್ಲಿ ಭಾರತವನ್ನು ಕಟ್ಟುವ ಮತ್ತು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಗುರುತರವಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಇದಕ್ಕೆ ಕೌಶಲ್ಯಯುತ ಜ್ಞಾನ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ವಿವಿಧ ಕೌಶಲ್ಯಗಳ ಮಹತ್ವದ ಬಗ್ಗೆ ತಿಳವಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳ ಗಮನ ಸೆಳೆದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೌಶಲ್ಯಯುತ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು. ಪ್ರಸ್ತುತ ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ಪಡೆಯಲು ವಿಶೇಷ ಕೌಶಲ್ಯಗಳು ಅನಿವಾರ್ಯವಾಗಿವೆ. ಇದಕ್ಕೆ ಭಾರತ ಸರ್ಕಾರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಚಿವಾಲಯದ ಮೂಲ ಉದ್ದೇಶ ಬೇಡಿಕೆ ಮತ್ತು ಕೌಶಲ್ಯಭರಿತ ಮಾನವ ಸಂಪನ್ಮೂಲ ದೊರಕಿಸುವುದು. ಭಾರತ ಸರಾಸರಿ ೨೯ ವರ್ಷ ವಯೋಮಾನದ ಯುವ ಸಮುದಾಯ ಹೊಂದಿದ್ದು, ಅದು ಯುಎಸ್‌ಎ, ಯೂರೋಪ್ ಮತ್ತು ಜಪಾನ್ ದೇಶಗಳ ಜನರ ಸರಾಸರಿ ವಯೋಮಾನಕ್ಕಿಂತ ಕಡಿಮೆ ಇದೆ. ಇದನ್ನು ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸದ್ಭಳಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಎರಡು ವಿವಿಧ ಗೋಷ್ಠಿಗಳಲ್ಲಿ ಇನ್ಫೋಸಿಸ್‌ನ ರಾಘವೇಂದ್ರ ಕಡಕೊಳ ಮತ್ತು ಬೊರಕ ಎಕ್ಸ್‌ಟ್ರೂಷನ್ ಲಿಮಿಟಿಡ್‌ನ ರಜತ್ ಅಗರವಾಲ್ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಕೌಶಲ್ಯ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ೪೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ೪೫ ಅಧ್ಯಾಪಕರು ಮತ್ತು ೧೦ ಸಂಶೋಧಕರು ಭಾಗವಹಿಸಿದ್ದರು. ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ, ಐಕ್ಯೂಎಸಿ ಸಂಯೋಜಕ ಮತ್ತು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಎನ್.ರಾಜೇಂದ್ರ ಪ್ರಸಾದ್ ಇದ್ದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮೂಲಭೂತವೆಂಬಂತಹ ಕೆಲವು ಕೌಶಲ್ಯಗಳು ಅಗತ್ಯವಾಗಿವೆ. ತಂತ್ರಜ್ಞಾನ, ಸಂವಹನ, ಸೃಜನಶೀಲತೆ, ಅನ್ವೇಷಣಾತ್ಮಕ ಮನೋಭಾವ, ತಾರ್ಕಿಕ ಚಿಂತನೆ, ಸಹಯೋಗ ಮನಸ್ಥಿತಿ, ನಿರ್ವಹಣೆ ಮುಂತಾದ ಕೌಶಲ್ಯಗಳು ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗುವುದಕ್ಕೆ ತೀರ ಅವಶ್ಯಕ.
-ಸ್ಯಾಮ್ ಚೆರಿನ್, ಮೈಸೂರಿನ ಸಿಐಐ ಅಧ್ಯಕ್ಷ