ಮಂಗಳೂರು (ದಕ್ಷಿಣ ಕನ್ನಡ):ಡಿಜಿಟಲ್ ಮೀಡಿಯಾದ ಬೆಳವಣಿಗೆಯಿಂದ ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮವು ತೆರೆಗೆ ಸರಿಯುತ್ತಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಿಸಿದ್ದಾರೆ. ಅವರು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿಜಿಟಲ್ ಮಾಧ್ಯಮದಿಂದಾಗಿ ಸುಳ್ಳು ಸುದ್ದಿಗಳ ಪ್ರಸಾರವೂ ಹೆಚ್ಚುತ್ತಿದ್ದು, ರಾಜ್ಯ ಮಟ್ಟದಲ್ಲಿ ಫ್ಯಾಕ್ಟ್ ಚೆಕ್ ಟೀಮ್ ಸುಳ್ಳು ಸುದ್ದಿ ಹರಡತ್ತಿರುವ ಬಗ್ಗೆ ನಿಗಾ ವಹಿಸುತ್ತಿದೆ ಎಂದರು.
ಸುಳ್ಳು ಸುದ್ದಿ ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ನೇರವಾಗಿ ಕ್ರಮ ವಹಿಸಲು ಸಾಧ್ಯವಾಗದ ಕಾರಣ ಸೈಬರ್ ಕ್ರೈಂನಡಿ ಇಂತಹ ಸುಳ್ಳು ಸುದ್ದಿ ಹರಡುವ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ ಎಂದವರು ಹೇಳಿದರು.
ಸುದ್ದಿಮನೆಯಲ್ಲಿ ಸದ್ದು ಇಲ್ಲದೆ ಕೆಲಸ ಮಾಡುವ ಪತ್ರಕರ್ತರ ಜೀವನ ದಯನೀಯವಾಗಿದೆ. ಸೇವಾ ಭದ್ರತೆ ಇಲ್ಲವಾಗಿದೆ. ಇದನ್ನು ಪರಿಗಣಿಸಿರುವ ನೂತನ ಸರಕಾರ ಪತ್ರಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.
ಸಮರ್ಪಕ ಜಾಹೀರಾತು ನೀತಿಯ ಮೂಲಕ ಡಿಜಿಟಲ್ ಮಾಧ್ಯಮಕ್ಕೂ ಅವುಗಳ ಸೇವಾಧಿಯ ಆಧಾರದಲ್ಲಿ ಸೌಲಭ್ಯ ಕಲ್ಪಿಸುವುದು, ಸೂಕ್ತ ಪಿಂಚಣಿ ವ್ಯವಸ್ಥೆ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ ಅಂದರು.