ಮೈಸೂರು: ಒಕ್ಕಲಿಗರು ರಾಜಕೀಯವಾಗಿ ಒಗ್ಗೂಡಿದರೆ ಸಾಲದು, ಕೌಟುಂಬಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಕೂಡ ಒಗ್ಗೂಡುವ ಮೂಲಕ ಅಭ್ಯುದಯ ಸಾಧಿಸುವ ಅಗತ್ಯವಿದೆ ಎಂದು ಶಾಸಕ ಕೆ. ಹರೀಶ್ ಗೌಡ ಕರೆ ನೀಡಿದರು.
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಹಾಗೂ ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಕೆ.ಜಿ.ಕೊಪ್ಪಲಿನ ಮರುಳೇಶ್ವರ ಸೇವಾ ಭವನದಲ್ಲಿ ನಡೆದ ೧೨ನೇ ವರ್ಷದ ಒಕ್ಕಲಿಗ ವಧು-ವರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕಲುತನ ಮಾಡುವ ಜೊತೆಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಹ ಒಕ್ಕಲಿಗರು ಮತ್ತಷ್ಟು ಎತ್ತರಕ್ಕೆ ಏರಬೇಕು. ಸಮುದಾಯದ ಅಭಿವೃದ್ಧಿಗೆ ವೈಯಕ್ತಿಕವಾಗಿ ಮತ್ತು ಶಾಸಕನಾಗಿ ಸದಾ ಶ್ರಮಿಸುವೆ. ಶೈಕ್ಷಣಿಕವಾಗಿ ಉನ್ನತಿ ಸಾಧಿಸಲುಸಮುದಾಯದ ಯುವ ಜನರು ಮುಂದಾಗಬೇಕು ಎಂದರು. ಒಕ್ಕಲಿಗ ವಧು ವರರ ಸಮಾವೇಶ ಆಗಾಗ ನಡೆಯುವುದರಿಂದ ದಾಂಪತ್ಯ ಬದುಕಿಗೆ ಕಾಲಿಡಲಿರುವ ಸಮುದಾಯದ ಜನರಿಗೆ ಅನುಕೂಲವಾಗಲಿದೆ. ಶ್ರಮ, ಕಾಲ, ಹಣವೂ ಉಳಿತಾಯವಾಗಲಿದೆ. ಆದ್ದರಿಂದ, ಇಂತಹ ವಧು ವರರ ಸಮಾವೇಶಗಳು ಕಾಲ ಕಾಲಕ್ಕೆ ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನ್ಯೂರೋ ಜೋನ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಾ. ಶುಶ್ರೂತ್ ಮಾತನಾಡಿ, ನೇಗಿಲಯೋಗಿ ಸಂಸ್ಥೆಯು ಒಕ್ಕಲಿಗ ಸಮುದಾಯದ ಯುವಜನರ ದಾಂಪತ್ಯ ಬದುಕಿನ ಕನಸಿಗೆ ಅನುಕೂಲವಾಗುವಂತೆ ವಧು ವರರ ಸಮಾವೇಶ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಆರ್. ಲೋಕನಾಥ್ ಮಾತನಾಡಿ, ವೇಗದ ಮತ್ತು ಒತ್ತಡದ ಬದುಕಿನಲ್ಲಿ ಮದುವೆಗೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ತಮಗೆ ಸೂಕ್ತವಾದ ಬಾಳ ಸಂಗಾತಿಯ ಆಯ್ಕೆ ಮಾಡಿಕೊಂಡು ನೆಮ್ಮದಿಯಿಂದ ಸುಖವಾದ ಬದುಕನ್ನು ಕಟ್ಟಿಕೊಳ್ಳಿ ಎಂದು ವಧು ವರರಿಗೆ ಸಲಹೆ ನೀಡಿದರು.
ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ. ಶೋಭಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ನೇಗಿಲಯೋಗಿ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಡಿ. ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಮನಗರದ ಜಿಲ್ಲಾಧ್ಯಕ್ಷ ಪಟೇಲ್ ಸಿ. ರಾಜು, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಎಸ್. ಮಲ್ಲಿಕಾರ್ಜುನಗೌಡ, ಕನಕಪುರ ತಾಲ್ಲೂಕು ಅಧ್ಯಕ್ಷ ಕಾಡೇಗೌಡ, ಸಾಹಿತಿ ಟಿ. ಸತೀಶ್ ಜವರೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಬಿ.ಎನ್. ಮಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.