ಹನೂರು: ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ರೈತ ಮುಖಂಡರುಗಳು ಪಟ್ಟಣದ ಸೆಸ್ಕಾಂ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಹನೂರು ಪಟ್ಟಣದ ಪೆಟ್ರೋಲ್ ಬಂಕ್ ಮುಂಭಾಗದಿಂದ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮೂಲಕ ಪ್ರತಿಭಟನೆ ಹೊರಟ ಪ್ರತಿಭಟನಾಕಾರರು ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ರಸ್ತೆ ಕಡೆ ನಡೆಸಿ ಪ್ರತಿಭಟನೆ ನಡೆಸಿ ನಂತರ ಕಚೇರಿ ಮುಂಭಾಗ ಜಮಾವಣಿಗೊಂಡು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ರಾಮಪುರ ರಾಜೇಂದ್ರ ಮಾತನಾಡಿ ಸರ್ಕಾರ ನಿಗದಿಪಡಿಸಿರುವಂತೆಯೇ 7 ಗಂಟೆಯ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡಬಾರದು ,ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಜಮೀನುಗಳಲ್ಲಿ ಹಾಕಲಾಗಿರುವ ಬೆಳೆಗಳಿಗೆ ನೀರು ಪೂರೈಕೆ ಮಾಡಲಾಗದೆ ಬೆಳೆಗಳು ಒಣಗುತ್ತಿದೆ, ವಿದ್ಯುತ್ ಇಲ್ಲದೆ ಇರುವುದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದೇವೆ, ಹಗಲು ವೇಳೆಯಲ್ಲಿಯೂ ಸಂಪೂರ್ಣ ಥ್ರೀ ಫೇಸ್ ವಿದ್ಯುತ್ ಪೂರೈಕೆ ಆಗಬೇಕು, ಕೆ ಆರ್ ಪಿ ಕಾನೂನಿನ ಪ್ರಕಾರವೇ 72 ಗಂಟೆಗಳಲ್ಲಿ ಕೆಟ್ಟು ನಿಂತ ಟಿಸಿಗಳ ದುರಸ್ತಿಯಾಗಬೇಕು ಅಥವಾ ಬದಲಿಸಬೇಕು ಎಂದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತ ಮುಖಂಡ ವಿಶ್ವೇಶ್ವರಯ್ಯ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ರೈತರು ಬೆಲೆ ನಿಗದಿ ಮಾಡುವಂತಿಲ್ಲ, ಆದರೆ ಉದ್ಯಮಿಗಳು ತಯಾರು ಮಾಡುವ ಪ್ರತಿಯೊಂದು ಪದಾರ್ಥಗಳಿಗೆ ಲಾಭ ಸೇರಿಸಿ ಅವರೇ ದರ ನಿಗದಿ ಮಾಡುತ್ತಾರೆ. ನಿಮ್ಮ ಇಲಾಖೆ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗದಿದ್ದರೆ ನಮ್ಮ ಬೆಳಗಳಿಗೆ ಆಗುವ ನಷ್ಟವನ್ನು ಸರ್ಕಾರ ಹಾಗೂ ನಿಮ್ಮ ಇಲಾಖೆಗಳಿಂದ ತುಂಬಿಕೊಡಿ. ನಾವು ನಿಮಗೆ ಯಾವುದೇ ಪ್ರಶ್ನೆ ಮಾಡುವುದಿಲ್ಲ ಇಂದೆ ಒಪ್ಪಂದ ಮಾಡಿಕೊಳ್ಳೋಣ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು ಆದರೆ ಇದಕ್ಕೆ ಅಧಿಕಾರಿಗಳು ಮೌನ ವಹಿಸಿದರೆ ಹೊರತು ಯಾವುದೇ ಪ್ರತಿಕ್ರಿಯಿಸಲಿಲ್ಲ .
ಇನ್ನು ಕೆಲವು ರೈತ ಮುಖಂಡರುಗಳು ವಿದ್ಯುತ್ ಸಮಸ್ಯೆ ಆದರೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಯಾರೊಬ್ಬರು ಸ್ಪಂದಿಸುವುದಿಲ್ಲ ಲೈನ್ ಮ್ಯಾನ್ ಗಳು ಪ್ರತಿಯೊಂದುಕ್ಕೂ ಲಂಚ ಕೇಳುತ್ತಾರೆ ಇಂತಹ ಭ್ರಷ್ಟ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಿಷ್ಠಾವಂತರನ್ನು ನೇಮಕ ಮಾಡಿ ಎಂದು ಆಗ್ರಹಿಸಿದರು.
ಸೆಸ್ಕಾಂ ಎಇಇ ಶಂಕರ್ ಮಾತನಾಡಿ ನಾವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದೇವೆ. ಟಿ ಸಿ ದುರಸ್ತಿಯಾದರೆ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದೆ. ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.