Saturday, April 19, 2025
Google search engine

Homeಸ್ಥಳೀಯಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ

ಪ್ರತಿಯೊಬ್ಬರೂ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿ

ಮೈಸೂರು: ಪ್ರತಿಯೊಬ್ಬರು ಹೊಣೆಗಾರಿಕೆ ತೆಗೆದುಕೊಂಡು ಸಮಾಜಮುಖಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಆಯೋಜಿಸಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕೆಲಸವನ್ನೂ ಸರ್ಕಾರವೇ ಮಾಡಲಿ ಎಂದುಕೊಂಡು ಸಾರ್ವಜನಿಕರು ಕೈಕಟ್ಟಿ ಕುಳಿತುಕೊಳ್ಳಬಾರದು. ಬದಲಿಗೆ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಸಾಮಾಜಿಕ ಕಾರ್ಯ ಮಾಡಬೇಕು. ಸುತ್ತಲಿನ ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಹಬಾಳ್ವೆ, ಸೌಹಾರ್ದತೆ ಕಾಪಾಡಿಕೊಳ್ಳುವಂತಹ ಸಣ್ಣ ಕೆಲಸವನ್ನಾದರೂ ಮೈಗೂಡಿಸಿಕೊಳ್ಳಬೇಕು ಎಂದರು. ದಾರಿ ತಪ್ಪುತ್ತಿರುವ ಯುವ ಜನರು, ಸಮಾಜವನ್ನು ಮಠಗಳು ಸತ್ಕಾರ್ಯದ ಮೂಲಕ ಸರಿದಾರಿಗೆ ತರುವ ಕೆಲಸವನ್ನು ಮಾಡುತ್ತಿವೆ. ಈ ವಿಷಯದಲ್ಲಿ ಸುತ್ತೂರು ಮಠದ ಕಾಣಿಗೆ ದೊಡ್ಡದು. ಇದು ಸರ್ಕಾರಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ದಾಸೋಹದಂತಹ ಜನೋಪಯೋಗಿ ಕಾಯಕವನ್ನು ಸರ್ಕಾರಕ್ಕಿಂತಲೂ ಮಠ ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರಿ-ಗುರು ಪರಂಪರೆ ಇಲ್ಲದಿದ್ದರೆ ಸಮಾಜ ಹಿಂದು ಬೀಳುತ್ತದೆ. ಆದರೆ, ನಾಡಿನ ಗುರು ಪರಂಪರೆ ಶ್ರೀಮಂತವಾಗಿದೆ. ಇದುವೇ ಭವಿಷ್ಯದ ಸಮಾಜವನ್ನು ಕಟ್ಟಲು ನೆರವಾಗಲಿದೆ ಎಂದರು.
ಪ್ರಸ್ತುತ ದಿನಮಾನದ ಸಂದರ್ಭವನ್ನು ಗಮನಿಸಿದರೆ ಸುಸಂಸ್ಕೃತ ಸಮಾಜ ನಿರ್ಮಾಣದ ಅಗತ್ಯತೆ ತುಂಬಾ ಇದೆ. ಚಂಚಲ ಮನಸುಗಳೇ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ಸಂಸ್ಕಾರಯುಕ್ತ ಜೀವನ ಸಾಗಿಸುವುದನ್ನು ಹೇಳಿಕೊಡಬೇಕು. ಅದಕ್ಕೆ ಪ್ರಶಸ್ತವಾದ ಕಾಲವೆಂದರೆ ಶ್ರಾವಣ ಮಾಸ. ಗುರುವಿನ ಬೆಂಬಲದೊಂದಿಗೆ ಸುಭದ್ರ ಭವಿಷ್ಯ ನಿರ್ಮಿಸಿಕೊಳ್ಳಬೇಕು. ಸಂಸ್ಕಾರ ಮರೆತಿರುವ ಯುವ ಜನತೆಗೆ ಸದ್ವಿಚಾರಗಳ ಹಾದಿ ತೋರಬೇಕು. ಅಂತಹ ಕೆಲಸವನ್ನು ಸುತ್ತೂರು ಮಠ ಮಾಡುತ್ತಿರುವುದು ಶ್ಲಾಘನೀಯ. ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತದ ನಿರ್ಮಾಣದತ್ತ ಹೆಜ್ಜೆ ಇಡಬೇಕು ಎಂದು ಹೇಳಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ಡಾ.ಪಿ.ಕೆ.ಎಂ.ಪ್ರಶಾಂತ್ ಮಾತನಾಡಿ, ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ಮಾಸದಂದು ಕೈಗೊಳ್ಳುವ ಪೂಜೆ ಪುನಸ್ಕಾರಗಳಿಗೆ ಫಲ ದೊರೆಯುತ್ತದೆ. ಭಗವಂತ ಭಕ್ತರ ಮನಸ್ಸಿನ ಇಚ್ಚೆಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಅದೋಗತಿಗೆ ತಲುಪಿರುವ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸಗಳನ್ನು ಮಠ ಮಾನ್ಯಗಳು ಪುರಾತನ ಕಾಲದಿಂದಲೂ ಮಾಡುತ್ತ ಬರುತ್ತಿವೆ ಎಂದರು.
ಮರಿಯಾಲ ಮುರುಘರಾಜೇಂದ್ರ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿ, ಭಗವಚ್ಚಿಂತನೆಯನ್ನು ಮಾಡಲು ಶ್ರಾವಣ ಮಾಸ ಸುಸಂದರ್ಭ. ಅಂತರಂಗದಲ್ಲಿ ಭಗವಂತನದರ್ಶನ ಮಾಡಿಸಿದವರು ಶರಣರು. ಮಾನವ ಜನ್ಮ ಸಾರ್ಥಕವಾಗಬೇಕಾದರೆ ಶರಣರ ಸಂದೇಶ, ವಿಚಾರಗಳನ್ನು ಆರ್ಜಿಸಬೇಕು ಎಂದು ತಿಳಿಸಿದರು.

ಡಾ. ಕೆ.ಅನಂತರಾಮು ಅವರು ಶ್ರಾವಣಕ್ಕೂ-ಶ್ರವಣಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾಸದಲ್ಲಿ ಸದ್ವಿಚಾರಗಳ ಚಿಂತನೆ ಮಾಡಿದರೆ ಸಾಲದು, ಬದುಕಿಗೆ ಅವುಗಳನ್ನು ಅಳವಡಿಸಿಕೊಳ್ಳಬೇಕು.ಸುಂಸ್ಕೃತರಾಗಿ ಬೆಳೆಯಲು ಇಂತಹ ಸತ್ಸಂಗಗಳು, ಪ್ರವಚನಗಳು ನಡೆಯುತ್ತಲೇ ಇರಬೇಕು. ಶರೀರವೆಂಬುದು ಎತ್ತಿನ ಬಂಡಿಯಂತೆ, ಈ ಬಂಡಿಗೆ ಆಸೆ-ಆಮಿಷಗಳೆಂಬ ಸರಕುತುಂಬಲಾಗಿದೆ. ಸದ್ವಿಚಾರದ ಸಂಗತಿಗಳು ಬಂಡಿಯಚಕ್ರದ ಕೀಲುಗಳಿಂದ್ದಂತೆ. ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖವನ್ನು ಪಡಬೇಕಾಗಿದೆ. ಬದುಕು ಉತ್ತಮ ಮೌಲ್ಯಗಳಿಂದ ರೂಪಗೊಳ್ಳಬೇಕು ಎಂದು ಹೇಳಿದರು.

ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾಮರಾಜನಗರ ತಾಲೂಕಿನ ಮರಿಯಾಲದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸೇರಿದಂತೆ ಇನ್ನಿತರರಿದ್ದರು.

RELATED ARTICLES
- Advertisment -
Google search engine

Most Popular