ಮೈಸೂರು: ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತವೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಲಿಕೆಯ ಹಂತದಲ್ಲಿ ಕೇವಲ ಪಠ್ಯಕ್ಕೆ ಮಾತ್ರವೇ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಅಧ್ಯಾತ್ಮಿಕ ಆರೋಗ್ಯ ಅತ್ಯಗತ್ಯ ಎಂದು ಸಂಸ್ಕೃತಿ ಚಿಂತಕ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳ ಕನಸು ದೂರದೃಷ್ಟಿ ಉಳ್ಳದ್ದು, ಹಿರಿದಾದದ್ದು ಆಗಿರಬೇಕು. ಪ್ರಾಪಂಚಿಕ ಜ್ಞಾನ ಸಂಪಾದನೆ ಈಗ ಬಲು ಸುಲಭ. ಜಗತ್ತು ಇಂದು ನಮ್ಮ ಅಂಗೈಯಲ್ಲಿಯೇ ಇದೆ. ನಾವು ನಮ್ಮ ಜ್ಞಾನ ಹೆಚ್ಚಿಸಿಕೊಳ್ಳುವುದಕ್ಕೆ ನಮ್ಮ ಮೊಬೈಲು ಫೋನುಗಳನ್ನು ಕ್ರಮಬದ್ಧವಾಗಿ ಬಳಸಿಕೊಳ್ಳಬೇಕು. ಕಾಲ ಕಳೆದಂತೆ ಶಿಕ್ಷಣದ ದೃಷ್ಟಿಕೋನವೂ ಬದಲಾಗಿದೆ. ಮುಂದಿನ ದಿನಗಳಲ್ಲಿ ಕೌಶಲ್ಯ ಉಳ್ಳವರಿಗೆ, ಪ್ರತಿಭಾನ್ವಿತರಿಗೆ ಗುರಿ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ. ಶಿಕ್ಷಣ ಸದೃಢವಾಗಿದ್ದರೆ ಜ್ಞಾನ, ಕೌಶಲ್ಯಗಳು ಸೂಕ್ತವಾಗಿದ್ದರೆ ಅವಕಾಶಗಳು ನೀವಿರುವಲ್ಲಿಗೇ ಹುಡುಕಿ ಬರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಎಸ್.ಪಿ.ಷಡಾಕ್ಷರಿ ಸ್ವಾಮಿ ಮಾತನಾಡಿ, ಕನಸುಗಳಿಲ್ಲದೆ ಜೀವನ ಸಾಧನೆಯ ಕಡೆಗೆ ಹೋಗಲಾರದು. ಕನಸು ದೊಡ್ಡದಾಗಿರಬೇಕು. ಜತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಸದಾ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಗಳಿಂದ ಹಾಗೂ ಅವುಗಳನ್ನು ಹೊಂದಿರುವವರಿಂದ ದೂರವಿರಬೇಕು. ಶಿಕ್ಷಣ ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಶಕ್ತಿ, ಸಾಮರ್ಥ್ಯ, ಪ್ರತಿಭೆಗಳನ್ನು ಅರಳಿಸುವ ಸಾಧನ. ಆ ಶಿಕ್ಷಣ ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿ ಮಾಡಬೇಕು. ಕಲಿಕೆಯ ಪರಿಸರವೂ ವ್ಯಕ್ತಿಯನ್ನು ರೂಪಿಸುವಲ್ಲಿ ಮುಖ್ಯವಾಗುತ್ತದೆ ಎಂದರು.
ಕಾಲೇಜು ಸಮುಚ್ಛಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಸಾಧನೆಗೆ ಬಡತನ, ಆರ್ಥಿಕ ಸ್ಥಿತಿಗತಿಗಳು ಕಾರಣವಾಗಲಾರವು. ದೃಢ ನಿರ್ಧಾರ, ಸಾಧಿಸುವ ಛಲ ಮುಖ್ಯ. ರಜನೀಕಾಂತ್, ಅಂಬಾನಿ, ಎಂ.ಎಸ್.ದೋನಿ, ಸಚಿನ್ ತೆಂಡುಲ್ಕರ್, ಅಕ್ಷಯ್ ಕುಮಾರ್ ಅವರಂತಹವರು ಶ್ರಮಪಟ್ಟು ಸಾಧಕರಾಗಿದ್ದಾರೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿ ಜೀವನದ ಒಂದು ಭಾಗವಾಗವಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ನಿರಂತರ ಪರಿಶ್ರಮದಿಂದ ಎಲ್ಲವೂ ಸಾಧ್ಯ. ಇದಕ್ಕಾಗಿ ನಾವು ಸಾಧನೆಗೈದ ಆದರ್ಶ ವಕ್ತಿಗಳ ಜೀವನ ಹಿನ್ನೆಲೆಗಳನ್ನು ತಿಳಿಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಎಸ್.ಪ್ರತಿಭಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್, ಕ್ರೀಡಾ ವೇದಿಕೆ ಸಂಚಾಲಕ ಎಂ.ಕಾರ್ತಿಕ್ ಉಪಸ್ಥಿತರಿದ್ದರು. ಅಗ್ನಿವೀರ್‌ಗೆ ಆಯ್ಕೆಯಾಗಿರುವ ಕಾಲೇಜಿನ ವಿದ್ಯಾರ್ಥಿಗಳಾದ ವಿಕ್ರಮ್ ನಾಯಕ್, ಹಾಗೂ ಸಾತ್ವಿಕ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜು ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು. ಕು. ಕೆ.ಎನ್ ಸನ್ನಿಧಿ ಮತ್ತು ತಂಡದವರು ಪ್ರಾರ್ಥಿಸಿದರು. ಕು.ಸಿ.ವಿ ಗಾನವಿ ಸ್ವಾಗತಿಸಿದರು. ಸಾಂಸ್ಕೃತಿಕ ವರದಿಯನ್ನು ದರ್ಶನ್ ರವರು ಮಂಡಿಸಿದರು. ಕು.ಚಾಂದಿನಿ ವಂದಿಸಿದರು. ಕು.ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.