ಮೈಸೂರು: ಇತ್ತೀಚಿನ ದಿನಗಳಲ್ಲಿ ರಂಗಭೂಮಿಗೆ ಕಲಾಭಿಮಾನಿಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಗಣಪತಿ ಮಿತ್ರಮಂಡಳಿಯ ಗೌರವಾಧ್ಯಕ್ಷ ಮಹಾಲಿಂಗು ಬೇಸರ ವ್ಯಕ್ತಪಡಿಸಿದರು.
ನಗರದ ರಂಗಾಚಾರ್ಲು ಭವನದಲ್ಲಿ ಗಣಪತಿ ಮಿತ್ರ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊದಿಗೆ ಆಯೋಜಿಸಿದ್ದ ರಂಗಭೂಮಿ ಪಿತಾಮಹರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಇದೇ ರಂಗಚಾರ್ಲು ಭವನದಲ್ಲಿ ಒಂದು ನಾಟಕ ಆಯೋಜನೆ ಮಾಡಿದರೆ ಟಿಕೆಟ್‌ಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಹೆಚ್ಚುವರಿ ಹಣ ಪಾವತಿಸಿ ಬ್ಲಾಕ್‌ನಲ್ಲಿ ಟಿಕೆಟ್ ಪಡೆದು ನಾಟಕ ವೀಕ್ಷಿಸುತಿದ್ದರು. ಆದರೆ, ಇಂದು ಇಡೀ ಭವನವೇ ಖಾಲಿಯಾಗಿರುತ್ತದೆ. ಇಂತಹ ಪರಿಸ್ಥಿತಿಗೆ ಕಲಾವಿದರು ಕಾರಣವೋ ಅಥವಾ ಕಲಾಪ್ರೇಕ್ಷಕರು ಕಾರಣವೋ ಎಂದು ಪರೀಕ್ಷಿಸುವುದು ಕಷ್ಟ ಎಂದು ಹೇಳಿದರು.
ರಂಗ ಕಲಾವಿದ ರಾಜೇಶ್ ಪಣಿಯಾರ್ ಮಾತನಾಡಿ, ಇಂದು ನಗರ ಪ್ರದೇಶದ ರಂಗಭೂಮಿ ನಾಟಕ ನೋಡಲು ಜನರು ಬರುವುದೇ ಕಡಿಮೆಯಾಗಿದ್ದರೂ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಮಾಜಿಕ ನಾಟಕದ ಒಲವು ಕಡಿಮೆ ಆಗಿಲ್ಲ. ಇಂದಿಗೂ ಹಳ್ಳಿಯ ಹಬ್ಬದ ಸಂದರ್ಭದಲ್ಲಿ ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ ಹೀಗೆ ಹಲವಾರು ಸಾಮಾಜಿಕ ನಾಟಕಗಳನ್ನು ಆಯೋಜಿಸಲಾಗುತ್ತದೆ. ಕುಟಂಬದ ಎಲ್ಲಾ ಸದಸ್ಯರು ಕುಳಿತು ನಾಟಕ ವೀಕ್ಷಿಸುವ ಪರಿಪಾಟ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.
ಗಾಯಕ ನಾಗೇಂದ್ರ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ರಂಗಭೂಮಿ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ಮಹನೀಯರ ನೆನೆಯುತ್ತಿರುವುದು ಬಹಳ ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ.ಎಲ್, ಸಂಗೀತ ನಿದೇರ್ಶಕ ಬಾಲಕೃಷ್ಣ, ನಾಗೇಶ್ ಇದ್ದರು.