ಮಂಡ್ಯ: ಕಾವೇರಿ ನೀರಿನ ಸಮಸ್ಯೆ, ರೈತರಿಗೆ ಅನ್ಯಾಯ ಆಗಿದೆ. ಅದರ ಬಗ್ಗೆ ಕ್ರಮ ಕೈಗೊಳ್ಳಲು ಚರ್ಚೆ ಮಾಡಲಾಗಿದೆ. ಇದು ರಾಜಕೀಯ ಹೋರಾಟ ಅಲ್ಲ, ರೈತರ ಪರ ಹೋರಾಟ. ಎಲ್ಲರನ್ನೂ ಸೇರಿಸಿಕೊಂಡು ಹೋರಾಟ ಮಾಡಬೇಕು ಎಂದು ಸಂಸದೆ ಸುಮಾಲತಾ ಅಂಬರೀಶ್ ಹೇಲಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ರೈತರ ಹೋರಾಟಕ್ಕೆ ಸಿದ್ದ. ಇದು ಬಿಜೆಪಿಯ ಹೋರಾಟ ಅಲ್ಲ ಎಲ್ಲರ ಹೋರಾಟ. ತಮಿಳುನಾಡಿನ ಪರವಾಗಿ ನಿರ್ಧಾರವಾಗ್ತಿದೆ. ರೈತರಿಗೆ ಅನ್ಯಾಯವಾಗ್ತಿದೆ. ನಮ್ಮ ಸರ್ಕಾರ ಯಾಕೆ ಹೋರಾಟ ಮಾಡ್ತಿಲ್ಲ? ಎಂದು ಪ್ರಶ್ನಿಸಿದರು.
ಹೋರಾಟದ ರೂಪುರೇಷೆ ನಡೆಯುತ್ತೆ. ಕಾವೇರಿ ನೀರಿನ ಅವಶ್ಯಕತೆ ಇರುವ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಬೇಕು. ಸರ್ಕಾರ ಒಳ್ಳೆಯ ಹೆಜ್ಜೆ ಇಡಬೇಕು. ಅಂಬರೀಶ್ ಅವರು ಕೇಂದ್ರ ಸಚಿವರಾಗಿದ್ದರು ಆಗ ಕಾಂಗ್ರೆಸ್ ಸರ್ಕಾರ ಇತ್ತು. ರಾಜ್ಯ ಸರ್ಕಾರದ ಪಾತ್ರ ಇಲ್ಲ ಅಂದ್ರೆ ಹೇಗೆ ಎಂದ ಅವರು, ನಮ್ಮ ರೈತರಿಗೆ ಅನ್ಯಾಯ ಆಗಬಾರದು ಎಂದು ನಮ್ಮ ಹೋರಾಟ ಎಂದು ಹೇಳಿದರು.
ಕೋರ್ಟ್ ನಲ್ಲಿ ನಿಂತು ವಾದ ಮಾಡಲು ಆಗಲ್ಲ. ಕೇಂದ್ರ ಸಚಿವರ ಜೊತೆಯಲ್ಲಿ ನಾನು ಚರ್ಚಿಸಿದ್ದೇನೆ. ಮಳೆ ಇಲ್ಲ ಅಂದಾಗ ತಮಿಳುನಾಡು ಕ್ಯಾತೆ ತೆಗೆಯುತ್ತಾರೆ. ತಕ್ಷಣವೇ ಆ್ಯಕ್ಷನ್ ತಗೊಳ್ತಾರೆ ನಮ್ಮವರು ಯಾಕೆ ಮಾಡಲ್ಲ ಎಂದು ಕೇಳಿದರು.
ರೈತರ ಸಮಸ್ಯೆಗಳು, ನೀರಿನ ಸಮಸ್ಯೆಗಳ ಬಗ್ಗೆ ಇಂದಿನ ಸಭೆ ಕರೆಯಲಾಗಿದೆ. ಸಭೆಗೆ ಹೋದ ಮೇಲೆ ಮತ್ತಷ್ಟು ವಿಚಾರ ತಿಳಿಯಲಿದೆ. ನೀರಿನ ಸಮಸ್ಯೆ ಬರಿ ರೈತರದಲ್ಲ, ಸಾಮಾನ್ಯ ಜನರ ಸಮಸ್ಯೆ ಕೂಡ ಆಗಿದೆ.ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿದರು.
ಮಳೆ ಬಾರದ ಕಾರಣ ದುರಾದೃಷ್ಟ ನೀರಿನ ಸಮಸ್ಯೆ ಇದೆ. ಕಳೆದ ಬಾರಿ ಮಳೆಯಾಗಿ ಬಾಗಿನ ಸಹ ಬಿಟ್ಟಿದ್ವಿ. ಇದು ನಮ್ಮ ರೈತರ ಕಷ್ಟ ನಾವು ಯಾವ ರೀತಿ ಹೋರಾಟ ಮಾಡುತ್ತೇವೆ ಅದು ಮುಖ್ಯ. ನಮಗೆ ಸಮಸ್ಯೆ ಇದ್ದರೂ ನೀರು ಬಿಡ್ತಿದ್ದಾರೆ. ತಮಿಳುನಾಡಿಗೆ ಹೆಚ್ಚು ಒಲವು ಇದೆ ನಾವು ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ನಮಗೆ ಸಮಸ್ಯೆ ಇದೆ, ನಮ್ಮ ಹೋರಾಟ ನಾವು ಮಾಡಬೇಕು ಎಂದು ತಿಳಿಸಿದರು.
ಕಾವೇರಿ ನೀರಿಗಾಗಿ ಸರ್ವಪಕ್ಷಗಳ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ-ರಾಜ್ಯ ಸರ್ಕಾರ ಒಟ್ಟಾಗಿ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು.
ರಾಜ್ಯದ ಬಿಜೆಪಿ ಸಂಸದರು ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ ಮಧು ಬಂಗಾರಪ್ಪ ಆರೋಪಕ್ಕೆ ಪ್ರತಿಕ್ರಿಯಿಸಿ, ಪಾರ್ಲಿಮೆಂಟ್ ನಲ್ಲಿ ನಾನು ಕಾವೇರಿ ನೀರಿನ ಬಗ್ಗೆ ಮಾತನಾಡಿದ್ದೇನೆ. ನಮ್ಮ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಕೇಂದ್ರದ ಸಚಿವರನ್ನು ಸಹ ಭೇಟಿ ಮಾಡಿದ್ದೇನೆ. ಇವತ್ತು ಸಮಸ್ಯೆಯಾಗಿದೆ ನಾವು ಖಂಡಿತ ಮಾತನಾಡ್ತೇವೆ. ಇವತ್ತು ರೈತರು ನಾಳೆ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಇದರಲ್ಲಿ ನಾನು ರಾಜಕೀಯ ಮಾತನಾಡಲ್ಲ ಎಲ್ಲರೂ ಸಹ ಹೋರಾಟ ಮಾಡಬೇಕು. ರೈತರ ಜೊತೆ ಎಲ್ಲರು ಸಹ ನಿಲ್ಲಬೇಕು ಎಂದರು.
ಬಿಜೆಪಿಗೆ ನನ್ನ ಸಪೋರ್ಟ್ ಅಷ್ಟೆ, ನಾನು ಬಿಜೆಪಿ ಮೆಂಬರ್ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗಲ್ಲ, ಅದು ಅವರಿಗೆ ಬಿಟ್ಟದ್ದು. ಎಲ್ಲವನ್ನೂ ನನ್ನ ಕೇಳಿ ಮಾಡಬೇಕು ಎಂಬ ರೂಲ್ಸ್ ಇಲ್ಲ. ಪ್ರತಿಯೊಂದು ವಿಷಯದಲ್ಲೂ ನಾನು ಮಧ್ಯ ಪ್ರವೇಶ ಮಾಡಲ್ಲ. ನನಗೆ ಕಮ್ಯುನಿಕೆಟ್ ಮಾಡಿದ್ರೆ ಮಾತ್ರ ಸಪೋರ್ಟ್ ಮಾಡ್ತೇನೆ ಎಂದು ಹೇಳಿದರು.
ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಪ್ರತಿಭಟನೆ ಕುರಿತು ಮಾತನಾಡಿ, ಚಲುವರಾಯಸ್ವಾಮಿ ಮೇಲಿನ ಆರೋಪಗಳ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದರು.
ಆಪರೆಷನ್ ಹಸ್ತ ವಿಚಾರವಾಗಿ ಮಾತನಾಡಿ, ಯಾರು ನನಗೆ ಆಹ್ವಾನ ಮಾಡಿಲ್ಲ, ನಾನು ಸಂತೋಷವಾಗಿದ್ದೇನೆ. ಇದಲ್ಲಾ ಊಹಾಪೋಹಗಳು. ರಾಜಕೀಯ ಅನ್ನೋದು ನನಗೆ ಅನಿವಾರ್ಯ ಅಲ್ಲ, ಆಕಸ್ಮಿಕ. ಎಲ್ಲವೂ ಸರಿ ಎನಿಸಿದ್ರೆ ಮಾತ್ರ ಮುಂದಿನ ಹೆಜ್ಜೆ. ಇದಕ್ಕೆಲ್ಲ ಈಗ ಉತ್ತರ ಕೊಡಲ್ಲ ಎಂದರು.
ಸಂಸದೆ ಸುಮಾಲತಾ ಬೆಂಬಲಿಗರಿಂದ ಚಲುವರಾಯಸ್ವಾಮಿ ಪರ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಅಭಿಪ್ರಾಯ ವ್ಯಕ್ತಪಡಿಸುವುದು ಅವರವರಿಗೆ ಬಿಟ್ಟಿದ್ದು ಎಂದು ಹೇಳಿದರು.