ಮೈಸೂರು: ಅನ್ನದಾನ, ವಿದ್ಯಾದಾನದಂತೆಯೇ ರಕ್ತದಾನ ಮಾಡುವುದು ಕೂಡ ಇಂದಿನ ಪ್ರಮುಖ ಆಗತ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರೋಟರಿ ಮೈಸೂರು ಸೌತ್ ಈಸ್ಟ್ ಕ್ಲಬ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ರಕ್ತ ಕ್ಯಾನ್ಸರ್ ಅಪಾಯ ತಗ್ಗುತ್ತದೆಂದು ಸಂಶೋಧಕರು ಪತ್ತೆಹಚ್ಚಿದ್ದಾರೆ. ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ ಮತ್ತು ರಕ್ತದ ಕ್ಯಾನ್ಸರ್ ಅವಕಾಶ ಕಡಿಮೆಯಾಗುತ್ತದೆ. ರಕ್ತದಾನದಿಂದ ರಕ್ತದಾನಿಗಳಿಗೆ ಏನೂ ನಷ್ಟವಾಗುವುದಿಲ್ಲ. ಆದರೆ, ನಿಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯದ ಅನುಕೂಲಗಳು ಬೆಲೆಕಟ್ಟಲಾಗದ್ದು ಎಂದು ಹೇಳಿದರು.
ರಕ್ತದಾನ ಒಬ್ಬರ ಜೀವ ಉಳಿಸುತ್ತದೆ. ಅದಕ್ಕೆ ಯಾವುದೇ ಪರ್ಯಾಯವಿಲ್ಲ. ಕೇವಲ ಒಂದು ದಾನ ನಾಲ್ವರ ಜೀವ ಉಳಿಸುತ್ತದೆ. ರಕ್ತದಾನದಿಂದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚುವರಿ ಕಬ್ಬಿಣಾಂಶದಿಂದ ಅಧಿಕ ರಕ್ತ ಒತ್ತಡ ಮುಂತಾದ ಅಡ್ಡ ಪರಿಣಾಮಗಳಿರುತ್ತವೆ. ಇದು ಲಿವರ್, ಹೃದಯ ಮತ್ತು ಪಿತ್ತಜನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡ ಉಲ್ಭಣವಾಗುತ್ತದೆ. ನಾವು ರಕ್ತದಾನ ಮಾಡಿದರೆ ಈ ಸಮಸ್ಯೆಗಳು ಇತ್ಯರ್ಥವಾಗುತ್ತವೆ ಅಂದರು.
ರಕ್ತದಾನ ಮಾಡುವ ಮೂಲಕ ನಿಮ್ಮ ಆರೋಗ್ಯದ ಜಾಡು ಹಿಡಿಯಬಹುದು ಮತ್ತು ಆಹಾರ, ವ್ಯಾಯಾಮ, ಜೀವನಶೈಲಿ ಮತ್ತಿತರ ಅಂಶಗಳು ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆಂದು ತಿಳಿಯಬಹುದು ಎಂದು ತಿಳಿಸಿದರು.
ರೋಟರಿ ಸಂಸ್ಥೆ ರಾಜಕೀಯೇತರ ಮತ್ತು ಧಾರ್ಮಿಕೇತರ ಸಂಸ್ಥೆಯಾಗಿದ್ದು, ಇತರರಿಗೆ ಸೇವೆ ಒದಗಿಸುವುದು, ಸಮಗ್ರತೆ ಉತ್ತೇಜಿಸುವುದು, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಮೂಲಕ ಅರೋಗ್ಯ ಸುಧಾರಿಸುವುದು, ತಾಯಂದಿರು ಮತ್ತು ಮಕ್ಕಳ ಆರೋಗ್ಯ ಸುಧಾರಿಸುವುದು, ಶಿಕ್ಷಣ, ಸಾಕ್ಷರತಾ ಕಾರ್ಯಕ್ರಮ, ನೀರು ಮತ್ತು ನೈರ್ಮಲ್ಯ, ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವುದು, ವ್ಯಾಪಾರ, ವೃತ್ತಿಪರ ಮತ್ತು ಸಮುದಾಯಿಕ ನಾಯಕರ ಸಹಭಾಗ್ವಿತದ ಮೂಲಕ ಪ್ರಪಂಚದ ತಿಳುವಳಿಕೆ, ಸದ್ಭಾವನೆ ಮತ್ತು ಶಾಂತಿ ಮುನ್ನಡೆಸುವುದು, ಪರಿಸರವನ್ನು ಬೆಂಬಲಿಸುವುದು ಇದರ ಪ್ರಮುಖ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮಿ, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಸ್ಯಶಾಸ್ತ್ರ ವಿಭಾಗದ ಡಾ.ಕೃಷ್ಣಮೂರ್ತಿ, ಡಾ.ಕೆ.ಎನ್.ರವೀಂದ್ರ, ಮೈಸೂರು ಸೌತ್ ಈಸ್ಟ್‌ನ ಮಾಜಿ ಅಧ್ಯಕ್ಷ ಎಂ.ಮೋಹನ್ ರವರು, ಡಾ.ಎನ್.ಎಸ್.ದಿವ್ಯ, ಡಾ.ಹೆಚ್.ಅರ್.ವಾಣಿಶ್ರೀ, ಡಾ.ಬಿ.ಎಂ.ಪುನೀತ್ ಕುಮಾರ್, ಡಾ. ರಚನಾ ಮೊದಲಾದವರು ಇದ್ದರು.