ನವದೆಹಲಿ: ಡೀಸೆಲ್ ಡ್ರಮ್‌ಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಬಸ್ ಡಿಕ್ಕಿಯಾಗಿ ೧೮ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡದಿದೆ.
ಈ ದುರ್ಘಟನೆಯಲ್ಲಿ ೧೬ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಕರಾಚಿಯಿಂದ ಇಸ್ಲಾಮಾಬಾದ್‌ಗೆ ೪೦ ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಭಾನುವಾರ ಬೆಳಗ್ಗೆ ೪:೩೦ ರ ಸುಮಾರಿಗೆ ಲಾಹೋರ್‌ನಿಂದ ೧೪೦ ಕಿಲೋಮೀಟರ್ ದೂರದಲ್ಲಿರುವ ಫೈಸಲಾಬಾದ್ ಮೋಟಾರು ಮಾರ್ಗದ ಪಿಂಡಿ ಬಟ್ಟಿಯಾನ್ ಪ್ರದೇಶದ ಬಳಿ ಡೀಸೆಲ್ ಡ್ರಮ್‌ಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನಕ್ಕೆ ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಫಹಾದ್ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಸಮಯದಲ್ಲಿ ಬಸ್ ಚಾಲಕ ನಿದ್ರಿಸಿದ್ದಾನೆಯೇ ಅಥವಾ ಅತಿಯಾದ ವೇಗದಿಂದ ಅಪಘಾತ ಸಂಭವಿಸಿದೆಯೇ? ಎಂದು ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಸಲಾಗತ್ತಿದೆ. ವ್ಯಾನ್‌ನಲ್ಲಿ ಇಂಧನ ಟ್ಯಾಂಕ್ ಇಲ್ಲದೇ ಇದ್ದಿದ್ದರೆ ಎರಡೂ ವಾಹನಗಳಿಗೆ ಬೆಂಕಿ ಬೀಳುತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ. ಮೃತರ ಗುರುತು ಡಿಎನ್‌ಎ ಪರೀಕ್ಷೆಯ ಮೂಲಕ ಪತ್ತೆ ಮಾಡಲಿದ್ದು, ಬಳಿಕ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.