ಬೆಂಗಳೂರು: ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಆಗಸ್ಟ್ 21ರಂದು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿತ್ತು. ಆದರೆ ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡುವುದಿಲ್ಲ ಮತ್ತು ಮಾಡುವುದು ತಪ್ಪಾಗುತ್ತದೆ. ಮಂಡ್ಯದ ಸಂಜಯ್ ಸರ್ಕಲ್ನಲ್ಲಿ ಪ್ರತಿಭಟನೆ ಇದೆ. ಧನ್ಯವಾದಗಳು ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ನಾಳೆ ಕಾವೇರಿ ಹೋರಾಟಕ್ಕೆ ಕರೆ ಕೊಟ್ಟಿದ್ದ ಬಿಜೆಪಿಗೆ ಆರಂಭಿಕ ಹಿನ್ನಡೆ ಉಂಟಾಗಿದ್ದು, ಹೆದ್ದಾರಿ ತಡೆಗೆ ಮಂಡ್ಯ ಪೊಲೀಸರು ಅನುಮತಿ ನೀಡಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿ ತಡೆಗೆ ನಿರ್ಧರಿಸಲಾಗಿತ್ತು. ಪೊಲೀಸರಿಂದ ಅನುಮತಿ ನಿರಾಕರಣೆ ಹಿನ್ನೆಲೆ ಇಂಡುವಾಳುಯಿಂದ ಸಂಜಯ ವೃತ್ತಕ್ಕೆ ಹೋರಾಟ ಶಿಫ್ಟ್ ಮಾಡಲಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ನಾಯಕರ ಕರೆಸಲು ಬಿಜೆಪಿ ನಿರ್ಧರಿಸಿದೆ.