Sunday, April 20, 2025
Google search engine

Homeಸ್ಥಳೀಯಕಾಡಿನವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು

ಕಾಡಿನವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು

ಮೈಸೂರು: ಬುಡಕಟ್ಟು ಸಮುದಾಯಗಳಲ್ಲೂ ಧರ್ಮ ಪ್ರವೇಶ ಮಾಡಿದ್ದು, ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ದೇಶದ ನೈಸರ್ಗಿಕ ಸಂಪನ್ಮೂಲ ಉಳಿಸುತ್ತಿರುವ ಕಾಡಿನ ಜನರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರ ವಿಶೇಷಾಧಿಕಾರಿಯೂ ಆದ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ ಹೇಳಿದರು. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದಲ್ಲಿ ಬುಡಕಟ್ಟುಗಳ ಪರಿವರ್ತನೆ: ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಕಾಡು ಮತ್ತು ಹಳ್ಳಿಗಳನ್ನು ಉಳಿಸುವ ಜತೆಗೆ ಜ್ಞಾನ ಹೆಚ್ಚು ಮಾಡಬೇಕು. ಕಾಡಿನ ಕೆರೆಯಲ್ಲಿ ಮೀನು ಹಿಡಿಯುವ ಬೇಟೆಗಾರರು ತಮಗೆ ಬೇಕಾದಷ್ಟು ಇಟ್ಟುಕೊಂಡು ಜಾಸ್ತಿ ಇದ್ದಿದ್ದನ್ನು ಮಾರಾಟ ಮಾಡಿದರೆ ಕಳ್ಳತನ ಎನ್ನುತ್ತಾರೆ. ಪೊಲೀಸ್ ಇಲಾಖೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿರುವುದನ್ನು ಹೇಳಿಕೊಳ್ಳುತ್ತಾರೆ. ಹಾಗಾಗಿ, ಬುಡಕಟ್ಟು ಜನರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ ಎಂದರು.

ಕಾಡು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಅಣೆಕಟ್ಟು, ರೆಸಾರ್ಟ್‌ಗಳು ಸೇರಿ ಮೊದಲಾದ ಅಭಿವೃದ್ಧಿಯಿಂದ ಬುಡಕಟ್ಟು ಜನರ ಅಭಿವೃದ್ಧಿ ಆಗಲಿದೆ ಎನ್ನುವ ಮಾತಿನ ನಿರೀಕ್ಷೆ ಸುಳ್ಳಾಗಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಆದಿವಾಸಿ ಜನರನ್ನು ಕಾಡಿನಿಂದ ದೂರ ಮಾಡಬಾರದು ಎಂದು ಹೇಳಿದರು.

ಕೂಡ್ಲಿಗಿ ಕ್ಷೇತ್ರದಲ್ಲಿ ಮ್ಯಾಸಬೇಡರ ಬಗ್ಗೆ ದೊಡ್ಡ ಅಧ್ಯಯನ ಮಾಡಲಾಯಿತು. ಅವರಲ್ಲಿರುವ ಅಗಾದ ಜ್ಞಾನ ಸಂಪತ್ತು ದೊಡ್ದದಾಗಿದೆ. ಹಾಗಾಗಿ, ದೇಶ ಮುನ್ನಡೆಸಲು ಬುಡಕಟ್ಟು ಜನರು ದೊಡ್ಡ ಹೆದ್ದಾರಿಗಳಾಗಿದ್ದಾರೆ. ಬುಡಕಟ್ಟು ಸಮಾಜವನ್ನು ನೋಡುವ ದೃಷ್ಟಿ ಬದಲಾವಣೆ ಆಗಿಲ್ಲದ ಕಾರಣ ಸಂಶೋಧಕರು ಮಾಡುವ ಅಧ್ಯಯನಗಳ ಕಾರ್ಯವೈಖರಿಯಲ್ಲಿ ಪರಿವರ್ತನೆ ಆಗಬೇಕು ಎಂದರು.
ಬುಡಕಟ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ಒದಗಿಸಬೇಕು. ಕೊರವ ಸಮಾಜ ಅಲ್ಪಾಯುಷಿಗಳಾಗುತ್ತಿದ್ದು, ಅವರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಬೇಕು. ರಾಜ್ಯದಲ್ಲಿ ಅತಿ ಕಡಿಮೆ ಇರುವ ಈ ಸಮುದಾಯದ ಜನರು ಉಳಿಯುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ.ಕಲ್ಲೇಶ್ ಮಾತನಾಡಿ, ಬುಡಕಟ್ಟು ಜನರು ಈ ದೇಶದ ಮೂಲ ನಿವಾಸಿಗಳು. ಹಲವಾರು ವರ್ಷಗಳಿಂದ ತಮ್ಮ ಕಲೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಕಾಡಿನಲ್ಲಿ ದೊರೆಯುವ ಸಂಪತ್ತನ್ನು ಬಳಸಿಕೊಂಡು ಬದುಕು ಸಾಗಿಸುತ್ತಿರುವ ಈ ಜನರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಬೇಕಿದೆ ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಎಲ್.ಶ್ರೀನಿವಾಸ ಮಾತನಾಡಿ, ೨೦೧೧ರಿಂದ ೨೦೨೨ರವರೆಗೆ ಬಾಡಿಗೆ ಕಟ್ಟಡದಲ್ಲಿ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆ ಈಗ ಸ್ವಂತ ಕಟ್ಟಡದಲ್ಲಿ ಕೆಲಸ ಆರಂಭಿಸಿದೆ. ೫೦ ಬುಡಕಟ್ಟು ಸಮುದಾಯಗಳ ಕುರಿತಂತೆ ಸಂಶೋಧನೆ, ಅಧ್ಯಯನ ನಡೆಯುತ್ತಿದೆ. ಬುಡಕಟ್ಟು ಸಮುದಾಯಗಳ ಸ್ಥಿತಿಗತಿ, ಕುಲಶಾಸ್ತ್ರೀಯ ಅಧ್ಯಯನ ಮಾಡಲಾಗುತ್ತಿದೆ. ಈತನಕ ೨೬ ಸಮುದಾಯಗಳ ಕುಲಶಾಸ್ತ್ರೀಯ ವರದಿ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಕೊರಮ ಸಮುದಾಯದ ಪಠ್ಯರಚನೆ ತಯಾರಾಗುತ್ತಿದೆ. ಆಶ್ರಮ ಶಾಲೆಗಳ ಬಗ್ಗೆ ಮೌಲ್ಯವಾಪನ ವಾಡಲಾಗುತ್ತಿರುವ ಜತೆಗೆ ಆರೋಗ್ಯ ಶಿಬಿರಗಳನ್ನು ನಡೆಸಿ ಆರೋಗ್ಯದಿಂದ ಇರುವಂತೆ ಮಾಡಲಾಗಿದೆ. ಸಚಿವರು ಹೇಳಿದ ಜಿಲ್ಲೆಯಲ್ಲಿ ಈ ಬಾರಿ ಬುಡಕಟ್ಟು ಉತ್ಸವ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರೊ.ಎಂ.ಜಡೇಗೌಡ ಆಶಯ ಭಾಷಣ ಮಾಡಿದರು. ಉಪ ನಿರ್ದೇಶಕಿ ಪ್ರಭಾ ಅರಸ್, ಸಂಶೋಧನಾಧಿಕಾರಿ ಶಿವಕುಮಾರ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular