ಮೈಸೂರು: ದೃಶ್ಯ ಕಲೆಗಳು ಅಳಿವಿನಂಚಿಗೆ ತಲುಪಿದ್ದು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತಹ ಕೆಲಸಗಳು ನಡೆಯಬೇಕಿದೆ ಎಂದು ದೃಶ್ಯ ಕಲಾವಿದ ಸುರೇಶ್ ಜೈರಾಮ್ ತಿಳಿಸಿದರು.
ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ(ಕಾವಾ) ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರದರ್ಶನ ಸಮಾರಂಧದಲ್ಲಿ ಮಾತನಾಡಿದ ಅವರು, ಎಷ್ಟೇ ಕುಂದು ಕರತೆಗಳಿದ್ದರೂ ಕಾವಾ ತನ್ನ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆಯುತ್ತಿದೆ ಎಂದು ಹೇಳಿದರು.
ದೃಶ್ಯಕಲಾ ವಿಭಾಗಗಳು ಮುಕ್ತವಾಗಿ ತನ್ನ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ದೃಶ್ಯಕಾವ್ಯ ಮಂಡಳಿಯ ಅವಶ್ಯಕವಿದೆ. ಈಗ ಮಾಡುವುದರಿಂದ ಮಾತ್ರ ವಿಭಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಾಧ. ಕಾಲೇಜಿನಲ್ಲಿ ಅವಶ್ಯಕತೆಗೆ ತಕ್ಕಷ್ಟು ಪ್ರಾಧ್ಯಾಪಕರಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿಯೂ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಶಿಕ್ಷಣ ವ್ಯವಸ್ಥೆಯ ಪಾಲಿಸಿಗಳು ಬದಲಾಗದ ಹೊರತು ಏನೂ ಮಾಡಲು ಸಾಧವಿಲ್ಲ. ಕಣ್ಮರೆಯಾಗುತ್ತಿರುವ ಕಲೆಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಧನಿ ಎತ್ತಬೇಕಿದೆ ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ದೃಶ್ಯಕಲಾವಿದೆ ಹಿಂದು ಆಂಟೋನಿ, ಜಯಸಿಂಹ.ಸಿ, ಸುರೇಖಾ ಹಾಗೂ ಇತರರು ಇದ್ದರು.
ಕಣ್ಮನ ಸೆಳೆವ ಕಲಾಕೃತಿ: ಕಾವಾ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಕೈಚಳಕದಿಂದ ಮೂಡಿಬಂದ ಕಲಾಕೃತಿಗಳು ಗ್ರಾಮೀಣ ಬದುಕಿನ ಸ್ಥಿತಿಗಳ ಅನಾವರಣ ಮಾಡಿವೆ. ಹಳ್ಳಿಗ ಮನೆಗಳಲ್ಲಿ ಇಂದಿಗೂ ಇರುವ ಹಟ್ಟವನ್ನು ಎಲೆಗಳಿಂದ ಮಾಡಿರುವ ಕಲಾಕೃತಿ ನೋಡುಗರ ಗಮನ ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಕೈಗೂ ಸ್ಮಾರ್ಟ್‌ಫೋನ್ ಸಿಕ್ಕಿರುವ ಕಾರಣ ಹೊರಾಂಗಣ ಕ್ರೀಡೆಗಳಾದ ಕಬಡ್ಡಿ, ಕೆನಾನ್ ಬಸ್ಟರ್, ಮರಕೋತಿ ಆಟ, ಬಾಸ್ಕೆಟ್ ಬಾಲ್, ಕ್ರಿಕೆಟ್‌ನಂತಹ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಈ ಕ್ರೀಡೆಗಳು ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುತ್ತವೆ. ಆದ್ದರಿಂದ ಮಕ್ಕಳು, ಯುವ ಸಮುದಾಯ ಮೊಬೈಲ್ ಗೀಳಿನಿಂದ ಹೊರಬಂದು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾರುವ ದೃಶ್ಯಗಳು ನೋಡುಗರನ್ನು ಬಾಲ್ಯದ ನೆನಪುಗಳಿಗೆ ಕೊಂಡೊಯ್ಯುತ್ತವೆ.