ಮೈಸೂರು: ಮಾಧ್ಯಮ ಪ್ರತಿನಿಧಿಗಳು ಮೌಲ್ಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ಜರ್ನೋತಿ-೨೩ ಮಾಧ್ಯಮ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದು, ಇದರ ಬಳಕೆಯಿಂದ ಪತ್ರಿಕೋದ್ಯಮ ಮೇಲ್ದರ್ಜೆಗೇರಿದೆ ಎಂದು ಹೇಳಿದರು. ಇದ್ದದ್ದನ್ನು ಇದ್ದ ಹಾಗೆ ಹೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾಧ್ಯಮದವರು ವೃತ್ತಿ ಮೌಲ್ಯ ಕಾಪಾಡಿಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಪತ್ರಕರ್ತ ಸುರ್ದಶನ್ ಚನ್ನಂಗಿಹಳ್ಳಿ ಮಾತನಾಡಿ, ಇತ್ತೀಚೆಗೆ ಪತ್ರಿಕೋದ್ಯಮದಲ್ಲಿ ಬದಲಾವಣೆಯಾಗಿದೆ. ಇತ್ತೀಚೆಗೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಟಿವಿ, ಡಿಜಿಟಲ್ ಮಾಧ್ಯಮಗಳ ಆಕರ್ಷಣೆಗೆ ಒಳಗಾಗಿ, ಮುದ್ರಣ ಮಾಧ್ಯಮಕ್ಕೆ ಬರುತ್ತಿಲ್ಲ. ಮುದ್ರಣ ಮಾಧ್ಯಮದಲ್ಲಿ ಅವಕಾಶ ಇದೆ. ಆದರೆ, ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಹುದ್ದೆ ಕೈಗೊಂಡರು ಇಲ್ಲಿ ಸಿಗುವ ಅನುಭವವೇ ಬೇರೆ. ಪತ್ರಕರ್ತರಾಗುವವರಿಗೆ ಪತ್ರಿಕೋದ್ಯಮ ಫ್ಯಾಷನ್, ಸಾಮಾಜಿಕ ಜವಾಬ್ದಾರಿ ಇರಬೇಕು. ಗಡಿಯಲ್ಲಿ ಯೋಧ ಕೆಲಸ ಮಾಡುವಂತೆ ಮನೋಭಾವದಲ್ಲಿ ಪತ್ರಕರ್ತ ತನ್ನ ಕೆಲಸ ಮಾಡಬೇಕಾಗುತ್ತದೆ. ಇತ್ತೀಚೆಗೆ ಮಾಧ್ಯಮ ಕ್ಷೇತ್ರಕ್ಕೆ ಬರುವವರು ಒಂದೇ ಬಾರಿಗೆ ದೊಡ್ಡ ಅವಕಾಶಗಳನ್ನು ಕೇಳುತ್ತಾರೆ ಎಂದರು.
ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕರುಗಳಾದ ಪ್ರೊ.ಎನ್.ಉಷಾ ರಾಣಿ, ಪ್ರೊ.ಬಿ.ಪಿ.ಮಹೇಶ್ ಚಂದ್ರ ಗುರು, ಪ್ರೊ.ಕೆ.ಜೆ.ಜೋಸೆಫ್, ಪ್ರೊ.ಜಿ.ಪಿ.ಶಿವರಾಮ, ಪ್ರೊ.ಪದ್ಮನಾಭ, ತಿಪ್ಪೇಸ್ವಾಮಿ ಇವರುಗಳನ್ನು ಸನ್ಮಾನಿಸಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ರಮೇಶ್ ಉತ್ತಪ್ಪ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನ, ಅತಿಥಿ ಉನ್ಯಾಸಕ ಡಾ.ಕೆ.ಎಸ್.ಕುಮಾರ್ ಸ್ವಾಮಿ, ಡಾ.ನವೀನ್, ಸಂಶೋಧನಾ ವಿದ್ಯಾರ್ಥಿಗಳಾದ ರಾಕೇಶ್, ಸಂಜಯ್, ಮಂಜುನಾಥ್ ಇತರರು ಹಾಜರಿದ್ದರು.