ಹಾಸನ: ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡ ಕಾರ್ಮಿಕನಿಗೆ ಚಿಕಿತ್ಸೆ ಕೊಡಿಸದೇ ಬೇಕರಿ ಮಾಲೀಕ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆ, ಸಕಲೇಶಪುರ ಮೂಲದ ಅಭಿ ಗಂಭೀರ ಗಾಯಗೊಂಡಿರುವ ಯುವಕ.
ಕಳೆದ ಎರಡು ತಿಂಗಳ ಹಿಂದೆಯಷ್ಟೆ ಆಂಧ್ರಪ್ರದೇಶದ ತೆಲಂಗಾಣದ ಬೇಲೂರು ತಾಲ್ಲೂಕಿನ, ಹಾಲ್ತೋರೆ ನಿವಾಸಿ ಪ್ರತಾಪ್‌ಗೌಡ ಮಾಲೀಕತ್ವದ ಬೇಕರಿಯಲ್ಲಿ ಅಭಿ ಕೆಲಸಕ್ಕೆ ಸೇರಿದ್ದ.
ಜೂ.2 ರಂದು ಬೆಳಿಗ್ಗೆ ಬೇಕರಿ ಬಾಗಿಲು ತೆಗೆದ ವೇಳೆ ಸಿಲಿಂಡರ್ ಸ್ಪೋಟವಾಗಿ ಅಭಿ ತೀವ್ರವಾಗಿ ಗಾಯಗೊಂಡಿದ್ದ. ಸುಟ್ಟ ಗಾಯಗಳಿಂದ ನರಳುತ್ತಿದ್ದ ಅಭಿಯನ್ನು ಅಕ್ಕಪಕ್ಕದ ಅಂಗಡಿಯವರು ಹಾಗೂ ಸಾರ್ವಜನಿಕರು ತೆಲಂಗಾಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಗೆ ಭೇಟಿ ನೀಡಿದ್ದ ಬೇಕರಿ ಮಾಲೀಕ ಪ್ರತಾಪ್‌ಗೌಡ, ಐದು ಸಾವಿರ ಹಣ ನೀಡಿ ಊರಿಗೆ ವಾಪಸ್ ತೆರಳುವಂತೆ ಹೇಳಿ ಹೋಗಿದ್ದ.
ಗಂಭೀರವಾಗಿ ಗಾಯಗೊಂಡಿದ್ದರು ಸ್ನೇಹಿತನ ಜೊತೆ ಬಸ್ಸಿನಲ್ಲೇ ಪ್ರಯಾಣಿಸಿ ಹಾಸನದ ಜಿಲ್ಲಾಸ್ಪತ್ರೆ ದಾಖಲಾಗಿ ಅಭಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿ ಅನಾಥ ಯುವಕನಾಗಿದ್ದು, ಊಟ, ತಿಂಡಿ, ಔಷಧಿಗೆ ಹಣವಿಲ್ಲದೆ ಪರದಾಡುತ್ತಿದ್ದಾನೆ.
ಗಾಯಾಳು ಚಿಕಿತ್ಸೆ, ಔಷಧಿಗೆ ಹಣ ನೀಡದೆ ಅಮಾನವೀಯ ವರ್ತನೆ ತೋರಿರುವ ಬೇಕರಿ ಮಾಲೀಕ ಪ್ರತಾಪ್‌ಗೌಡ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಅನಾಥ, ಬಡ ಯುವಕ ಅಭಿಗೆ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ನೀಡುವಂತೆ ಸ್ನೇಹಿತರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.