ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾಯಿತರಾದ ಶಾಸಕರು ಹಾಗೂ ಸಂಸದರು ಅಧಿಕಾರಿಗಳ ಮೇಲೆ ಬೆದರಿಕೆ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದಕ್ಕೆ ಜಗ್ಗದೆ ಕಾನೂನು ಪ್ರಕಾರ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಅವರು ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ನೀರಿನಿಂದ ತೆಗೆದ ಮೀನಿನಂತಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಅಕ್ರಮ ಸಕ್ರಮ ಸಮಿತಿಯಡಿ 71 ಪ್ರಕರಣಗಳು ಕಾನೂನು ಬಾಹಿರವಾಗಿ ನಡೆಸಿರುವ ಬಗ್ಗೆ ದೂರು ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಉಜ್ವಲ ಯೋಜನೆಯನ್ನು ಕ್ಷೇತ್ರದ ಮತದಾರನೂ ಅಲ್ಲದ, ಶಾಸಕನೂ ಅಲ್ಲದವರಿಂದ ಹಂಚಿಕೆ ಮಾಡಲಾಗಿದೆ. ಇಂತಹ ದಬ್ಬಾಳಿಕೆಗಳು ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳ ಮೂಲಕ ನಡೆಸಲಾಗುತ್ತಿತ್ತು. ಅದನ್ನೀಗ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಧಿಕಾರಿಗಳನ್ನು ಬೆದರಿಸುವ ತಂತ್ರವನ್ನು ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 136 ಶಾಸಕರನ್ನು ಗೆದ್ದ ಬಲಿಷ್ಟ ಸರಕಾರ ಆಡಳಿತದಲ್ಲಿದೆ. ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಬಾರದು. ಶಿಷ್ಟಾಚಾರ ನೆಪದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲಿ ನಡೆದ ಬಿಜೆಪಿ ಜನಪ್ರತಿನಿಧಿಗಳ ಪ್ರತಿಭಟನೆಯನ್ನು ಕಾಂಗ್ರೆಸ್ ಖಂಡಿಸುವುದಾಗಿ ಅವರು ಹೇಳಿದರು.