ಚಿತ್ರದುರ್ಗ: ಯಾವುದೇ ರೋಗ ಬಂದಾಗ ತೊಂದರೆ ಅನುಭವಿಸುವುದಕ್ಕಿಂತಲೂ, ರೋಗ ಬಾರದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಿಕೊಂಡು, ಸುರಕ್ಷಿತವಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಸೂಕ್ತ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿಗಳ ವತಿಯಿಂದ ಬುಧವಾರ ನಗರದ ಬುದ್ಧ ನಗರ ಬಳಿಯ ನಗರ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಡೆಂಗಿ ಜಾಗೃತಿ ರಥಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಡೆಂಗಿ ಜಾಗೃತಿ ರಥವು ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಿಗೆ ತೆರಳಿ ಗ್ರಾಮೀಣ ಪ್ರದೇಶಗಳಲ್ಲಿ ಕೀಟಜನ್ಯ ರೋಗಗಳ ತಡೆ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು. ರೋಗ ಬರುವು ದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದಲ್ಲಿ, ರೋಗ ಹರಡುವುದನ್ನು ತಡೆಗಟ್ಟಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಕಾಯ್ದುಕೊಳ್ಳುವ ಮೂಲಕ ಕೀಟಜನ್ಯ ರೋಗಗಳ ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದರು.
ಕಳೆದ ವರ್ಷ 442ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು, ಈ ವರ್ಷ ಇದುವರೆಗೆ 123 ಡೆಂಗಿ ಪ್ರಕರಣಗಳು ವರದಿಯಾಗಿವೆ, ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷ ಕಡಿಮೆ ಪ್ರಕರಣಗಳು ಕಂಡು ಬಂದಿವೆ. ಇದು ಹೆಚ್ಚಾಗದಂತೆ ನೋಡಿಕೊಳ್ಳಲು ಈ ಡೆಂಗಿ ಜಾಗೃತಿ ರಥವನ್ನು ಹಳ್ಳಿ ಹಳ್ಳಿಗಳಿಗೆ ಕಳುಹಿಸಿ ಡೆಂಗಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಾಶಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.